ಅಪ್ರಾಪ್ತ ವಯಸ್ಕರ ಮೇಲೆ ಸಮ್ಮತಿಯಿಲ್ಲದ ಲೈಂಗಿಕ ದೃಢೀಕರಣ ಶಸ್ತ್ರಚಿಕಿತ್ಸೆ ಮಗುವಿನ ಘನತೆ ಮತ್ತು ಗೌಪ್ಯತೆಗೆ ಧಕ್ಕೆ ತರುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಏಳು ವರ್ಷದ ಹೆಣ್ಣು ಮಗುವಿನ ಅಸ್ಪಷ್ಟ ಜನನಾಂಗದ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡುವಂತೆ ಪೋಷಕರು ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿ.ಜಿ. ಅರುಣ್, ಆಗಸ್ಟ್ 7 ರಂದು ಹೊರಡಿಸಿದ ಆದೇಶದಲ್ಲಿ, ಲೈಂಗಿಕತೆ ಅಥವಾ ಗುರುತನ್ನು ಆಯ್ಕೆ ಮಾಡುವ ವ್ಯಕ್ತಿಯ ಹಕ್ಕನ್ನು ಹಸ್ತಕ್ಷೇಪ ಮಾಡುವುದು ಖಂಡಿತವಾಗಿಯೂ ಆ ವ್ಯಕ್ತಿಯ ಗೌಪ್ಯತೆ ಪೆಟ್ಟು ನೀಡುತ್ತದೆ. ಇದು ಅವನ/ಅವಳ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಆದರೆ, ಮಗುವಿನ ಆರೋಗ್ಯದ ಬಗ್ಗೆ ಪೋಷಕರ ಕಾಳಜಿಯನ್ನು ಪರಿಗಣಿಸಿದ ನ್ಯಾಯಾಲಯ, ಸರಿಯಾಗಿ ರಚಿತವಾದ ವೈದ್ಯಕೀಯ ಮಂಡಳಿಯ ಶಿಫಾರಸಿನ ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೇಳಿದೆ. ಇದಕ್ಕಾಗಿ ಶಿಶುವೈದ್ಯರು, ಮಕ್ಕಳ ಶಸ್ತ್ರಚಿಕಿತ್ಸಕರು ಮತ್ತು ಮಕ್ಕಳ ಮನೋವೈದ್ಯರು ಸೇರಿದಂತೆ ತಜ್ಞರನ್ನು ಒಳಗೊಂಡಿರುವ ರಾಜ್ಯ ಮಟ್ಟದ ಬಹುಶಿಸ್ತೀಯ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಮೂರು ತಿಂಗಳೊಳಗೆ ಶಿಶುಗಳು ಮತ್ತು ಮಕ್ಕಳ ಲೈಂಗಿಕ ಆಯ್ದ ಶಸ್ತ್ರಚಿಕಿತ್ಸೆಗಳನ್ನು ನಿಯಂತ್ರಿಸುವ ಆದೇಶವನ್ನು ಹೊರಡಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕ್ರೋಮೋಸೋಮಲ್ ವಿಶ್ಲೇಷಣೆಯ ವರದಿಯು ಅನುಮತಿ ನೀಡಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಏಕೆಂದರೆ ಕ್ಯಾರಿಯೋಟೈಪ್-46XX ಹೊಂದಿರುವ ಮಗುವಿಗೆ ಪ್ರೌಢಾವಸ್ಥೆಯಲ್ಲಿ ಪುರುಷ ಪ್ರವೃತ್ತಿ ಬೆಳೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ತಿಳಿಸಿದೆ.
ಜನನಾಂಗದ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯನ್ನು ನಡೆಸಲು ಅನುಮತಿ ನೀಡುವಿಕೆಯು ಭಾರತದ ಸಂವಿಧಾನದ 14, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳಿಗೆ ಅಡ್ಡಿಯಾಗುತ್ತದೆ ಮತ್ತು ಒಪ್ಪಿಗೆಯಿಲ್ಲದೆ ಶಸ್ತ್ರಚಿಕಿತ್ಸೆ ನಡೆಸುವುದು ಮಗುವಿನ ಘನತೆ ಮತ್ತು ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ತೀರ್ಪಿತ್ತಿದೆ.
ವೈದ್ಯಕೀಯ ಮಂಡಳಿಯು ಅರ್ಜಿದಾರರ ಮಗುವನ್ನು ಎರಡು ತಿಂಗಳೊಳಗೆ ಪರೀಕ್ಷಿಸಬೇಕು. ಅಸ್ಪಷ್ಟ ಜನನಾಂಗದ ಕಾರಣದಿಂದ ಮಗುವಿನ ಪ್ರಾಣಕ್ಕೆ ಅಪಾಯವಾಗುವ ಪರಿಸ್ಥಿತಿ ಇದೆಯೇ ಎಂಬುದನ್ನು ಗಮನಿಸಬೇಕು. ಏನೂ ತೊಂದರೆಯಾಗದಿದ್ದಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡಬಹುದು ಎಂದು ಕೋರ್ಟ್ ಹೇಳಿದೆ.