ಕೊಳಕು ಹೊದಿಕೆಗಳನ್ನು ನೀಡಿದ ಪರಿಣಾಮ ರೈಲು ಪ್ರಯಾಣಿಕರ ಆರೋಗ್ಯ ಹದಗೆಟ್ಟ ಘಟನೆ ಆಘಾತ ಹೆಚ್ಚಿಸುವುದರೊಂದಿಗೆ ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದ ವಾರಣಾಸಿಗೆ ಪ್ರಯಾಣಿಸುತ್ತಿದ್ದ 15008 ಕ್ರಿಶಕ್ ಎಕ್ಸ್ ಪ್ರೆಸ್‌ನಲ್ಲಿ ಒದಗಿಸಿದ ಕೊಳಕು ಹೊದಿಕೆಗಳು ಮೂವರು ಪ್ರಯಾಣಿಕರ ಆರೋಗ್ಯವನ್ನು ಹದಗೆಡಿಸಿರೋ ವರದಿಯಾಗಿದೆ.
ರೈಲು ಲಕ್ನೋ ಜಂಕ್ಷನ್‌ನಿಂದ ಹೊರಡುವ ಹಂತದಲ್ಲಿದ್ದ ತಕ್ಷಣ AC ಕೋಚ್ B-5 ನಲ್ಲಿದ್ದ ಪ್ರಯಾಣಿಕರು ಹೊದಿಕೆಗಳಿಂದ ದುರ್ವಾಸನೆ ಬರುತ್ತಿದ್ದುದನ್ನ ದೂರಿದರು. ಈ ವೇಳೆ ಕಂಬಳಿಗಳನ್ನು ಬದಲಾಯಿಸಲಾಯಿತು. ಆದರೆ ರೈಲು ಬಾದಶಹನಗರ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಕೆಲವು ಪ್ರಯಾಣಿಕರು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು.
ತರಾತುರಿಯಲ್ಲಿ ರೈಲನ್ನು ನಿಲ್ದಾಣದಲ್ಲಿ ನಿಲ್ಲಿಸಿ ಬಾದಶಹನಗರ ರೈಲ್ವೆ ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಕರೆಸಲಾಯಿತು.
ಸ್ಥಳಕ್ಕೆ ಆಗಮಿಸಿದ ತಂಡ ಮೂವರು ಪ್ರಯಾಣಿಕರನ್ನು ತಪಾಸಣೆ ನಡೆಸಿತು. ಹೊದಿಕೆಯ ವಾಸನೆಯಿಂದಾಗಿ ವಾಕರಿಕೆ ಬರಲಾರಂಭಿಸಿತು ಎಂದು ಪ್ರಯಾಣಿಕರು ತಂಡಕ್ಕೆ ಮಾಹಿತಿ ನೀಡಿದರು. ಪ್ರಯಾಣಿಕರಿಗೆ ಅಗತ್ಯ ಔಷಧೋಪಚಾರ ನೀಡಿದ ಬಳಿಕ ಪ್ರಯಾಣಿಕರು ಚೇತರಿಸಿಕೊಂಡಿದ್ದರಿಂದ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು.
ಈ ಘಟನೆಯು ರೈಲುಗಳಲ್ಲಿ ಹೊದಿಕೆ ಪೂರೈಕೆಯ ಸ್ವಚ್ಛತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏತನ್ಮಧ್ಯೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೊಬ್ಬರು ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ರೈಲ್ವೆ ಇದುವರೆಗೆ ಯಾವುದೇ ಕ್ರಮವನ್ನು ದೃಢಪಡಿಸಿಲ್ಲ.