ಮಂಗಳವಾರದಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ ಈವರೆಗೆ 6,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕೂಡ ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ಹರಿದಾಡುತ್ತಿದ್ದು ವೈರಲ್ ಆಗಿದೆ. ಈ ಫೋಟೋದಲ್ಲಿ ಕುಸಿದ ಕಟ್ಟಡದಲ್ಲಿ ಸಿಲುಕಿರುವ ಏಳು ವರ್ಷದ ಬಾಲಕಿಯೊಬ್ಬಳು ತನ್ನ ಪುಟ್ಟ ತಮ್ಮನಿಗೆ ಯಾವುದೇ ಅಪಾಯವಾಗದಿರಲಿ ಎಂದು ಅಂತಹ ಪರಿಸ್ಥಿತಿಯಲ್ಲೂ ಆತನ ತಲೆ ಮೇಲೆ ತನ್ನ ಕೈ ಅಡ್ಡ ಹಿಡಿಯುವ ಮೂಲಕ ಆತನಿಗೆ ಬೆಂಗಾವಲಾಗಿದ್ದಾಳೆ.
ಈ ಫೋಟೋವನ್ನು ವಿಶ್ವಸಂಸ್ಥೆಯ ಪ್ರತಿನಿಧಿ ಮೊಹಮ್ಮದ್ ಸಫಾ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಈ ಪುಟ್ಟ ಅಕ್ಕ – ತಮ್ಮ ಸುರಕ್ಷಿತವಾಗಿ ಪಾರಾಗಿ ಬರಲಿ ಎಂದು ಹಾರೈಸುತ್ತಿದ್ದಾರೆ. ಅಲ್ಲದೆ ಅಂತಹ ಕಠಿಣ ಸಂದರ್ಭದಲ್ಲೂ ಸಹ ತನ್ನ ತಮ್ಮನ ರಕ್ಷಣೆಗೆ ನಿಂತಿರುವ ಬಾಲಕಿಯನ್ನು ಶ್ಲಾಘಿಸುತ್ತಿದ್ದಾರೆ.