ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದು, ಅವರೊಂದಿಗೆ 71 ಮಂದಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಭಾನುವಾರದಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೇಶ – ವಿದೇಶದ ಗಣ್ಯರು, ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ಮೋದಿ ಸಂಪುಟಕ್ಕೆ ಸೇರ್ಪಡೆಯಾದ 71 ಮಂದಿ ಪೈಕಿ ಏಳು ಮಂದಿ ಮಹಿಳೆಯರಿದ್ದು, ಇವರಲ್ಲಿ ಕರ್ನಾಟಕದ ಶೋಭಾ ಕರಂದ್ಲಾಜೆ ಕೂಡ ಸೇರಿದ್ದಾರೆ. ಇನ್ನುಳಿದಂತೆ ನಿರ್ಮಲಾ ಸೀತಾರಾಮನ್, ಅನ್ನಪೂರ್ಣ ದೇವಿ, ರಕ್ಷಾ ಖಾಂಡ್ಸೆ, ಸಾವಿತ್ರಿ ಠಾಕೂರ್ ಮತ್ತು ನಿಂಬುಬೆನ್ ಬಂಭಾನಿಯಾ (ಎಲ್ಲರೂ ಬಿಜೆಪಿ) ಹಾಗೂ ಅಪ್ನಾದಳದ ಸಂಸದೆ ಅನುಪ್ರಿಯಾ ಪಟೇಲ್ ಇದ್ದಾರೆ.
ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಏಳು ಮಂದಿ ಮಹಿಳೆಯರ ಪೈಕಿ ನಿರ್ಮಲಾ ಸೀತಾರಾಮನ್ ಹಾಗೂ ಅನ್ನಪೂರ್ಣ ದೇವಿ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಕ್ಕಿದ್ದರೆ ಇನ್ನುಳಿದವರಿಗೆ ರಾಜ್ಯ ಸಚಿವ ಸ್ಥಾನ ಕಲ್ಪಿಸಲಾಗಿದೆ.
ಕಳೆದ ಅವಧಿಯ ಮೋದಿ ಸರ್ಕಾರದಲ್ಲಿ 10 ಮಂದಿ ಮಹಿಳಾ ಮಂತ್ರಿಗಳಿದ್ದು, ಈ ಬಾರಿ ಇವರ ಸಂಖ್ಯೆ ಏಳಕ್ಕೆ ಇಳಿದಿದೆ. ಕಳೆದ ಬಾರಿ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಸ್ಮೃತಿ ಇರಾನಿ ಹಾಗೂ ಭಾರತಿ ಪವಾರ್ ಈ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.