ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಉಭಯ ಗೋದಾವರಿ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿಯ ನಂತರ ಮಿನಿ ಲಾರಿಯೊಂದು ಪಲ್ಟಿಯಾಗಿ ಏಳು ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಏಲೂರು ಜಿಲ್ಲೆಯ ತಿ.ನರಸಾಪುರಂ ಮಂಡಲದ ಬೊರ್ರಂಪಾಲೆಂನಿಂದ ಗೋಡಂಬಿ ಲೋಡ್‌ನೊಂದಿಗೆ ಮಿನಿ ಲಾರಿ ಹೊರಟಿತ್ತು. ಅರಿಪಾಟಿದಿಬ್ಬಾಳು-ಚಿನ್ನಾಯಿಗುಡೆಂ ರಸ್ತೆಯ ದೇವರಪಲ್ಲಿ ಮಂಡಲದ ಚಿಲಕವಾರಿಪಕಲು ಬಳಿ ಮಿನಿ ಲಾರಿಯೊಂದು ಪಲ್ಟಿಯಾಗಿ ತಡೆಗೋಡೆಗೆ ಗುದ್ದಿದೆ.
ಈ ಅವಘಡದಲ್ಲಿ ಸಮೀಶ್ರಗುಡ್ಡೆ ಮಂಡಲದ ತಾಡಿಮಲ್ಲದ ದೇವಬತ್ತುಲ ಬೂರಯ್ಯ, ತಮ್ಮಿರೆಡ್ಡಿ ಸತ್ಯನಾರಾಯಣ, ತಾಡಿ ಕೃಷ್ಣ, ಕಟ್ಟವ್ವ ಕೃಷ್ಣ, ಕಟ್ಟವ್ವ ಸತ್ತಿಪಂಡು, ಪಿ.ಚಿನಮುಸಲಯ್ಯ, ನಿಡದವೋಲು ಮಂಡಲ ಕಟಕೋಟೇಶ್ವರ ಬೊಕ್ಕ ಪ್ರಸಾದ್ ಮೃತಪಟ್ಟವರು. ಈ ವೇಳೆ ಮಿನಿ ಲಾರಿಯಲ್ಲಿ 9 ಮಂದಿ ತಂಡದ ಸದಸ್ಯರಿದ್ದು, ಚಾಲಕ ಪರಾರಿಯಾಗಿದ್ದಾನೆ. ವಾಹನ ಪಲ್ಟಿಯಾಗಿ 7 ಮಂದಿ ಗೋಡಂಬಿ ಚೀಲದಡಿ ಸಿಲುಕಿ ಸಾವನ್ನಪ್ಪಿದ್ದಾರೆ
ಗಾಯಗೊಂಡವರಲ್ಲಿ ಒಬ್ಬನನ್ನು ಘಂಟಾ ಮಧು ಎಂದು ಗುರುತಿಸಲಾಗಿದೆ. ಅಪಘಾತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಅಪಘಾತದ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.