![](https://kannadadunia.com/wp-content/uploads/2022/01/sevalal-shree.png)
ದಾವಣಗೆರೆ: ಸಂತ ಸೇವಾಲಾಲರ 283 ನೇ ಜಯಂತಿ ರದ್ದುಪಡಿಸಲಾಗಿದೆ. ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸಂತ ಸೇವಾಲಾಲರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಡಳಿತ, ಸೇವಾಲಾಲ್ ಪ್ರತಿಷ್ಠಾನ ಹಾಗೂ ಬಣಜಾರ ಸಮುದಾಯದ ಮುಖಂಡರ ಸಭೆ ಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ.
ಅತ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದ್ದು, ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಈಗಾಗಲೇ ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿ ಹರಡುತಿದ್ದು, ಕೆಲ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 200 ರಷ್ಟು ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಹಲವು ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ಸಿರಿಗೆರೆ ಜಾತ್ರೆ, ಹರಜಾತ್ರೆ ರದ್ದುಪಡಿಸಲಾಗಿದೆ, ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ 2 ರಿಂದ 3 ಲಕ್ಷ ಜನ ಭಾಗವಹಿಸುವುದರಿಂದ ಜಾತ್ರೆ ರದ್ದು ಮಾಡಿ ಸರಳ ಜಯಂತಿ ಆಚರಿಸೋಣ ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಮಾತನಾಡಿ, ಕೋವಿಡ್ ಭೀಕರವಾಗಿ ಹಬ್ಬುತಿದ್ದು ಇಂದಿನ ಅನಿವಾರ್ಯತೆ ಎಲ್ಲರಿಗೂ ಅರ್ಥವಾಗಿದೆ. ಸೇವಾಲಾಲ್ ಜಯಂತಿ ಸರಳವಾಗಿ ನಿಗದಿತ ದಿನಾಂಕದಂದೇ ನಡೆಯಲಿ, ಜಾತ್ರೆ ಆಚರಣೆ ಇಲ್ಲದಿರುವುದರಿಂದ ಯಾವುದೇ ಮಾಲಾಧಾರಿಗಳು ಸುಕ್ಷೇತ್ರಕ್ಕೆ ಬರುವುದು ಬೇಡ, ತಮ್ಮ ತಮ್ಮ ಮನೆಗಳಲ್ಲಿಯೇ ಆಚರಣೆ ಮಾಡಿಕೊಳ್ಳಲಿ. ಜಯಂತಿಯನ್ನು ಸಾಂಕೇತಿಕವಾಗಿ ಮಾಡೋಣ. ದೊಡ್ಡ ಕಾರ್ಯಕ್ರಮ ಮಾಡುವುದು ಬೇಡ, ಕೊರೊನ ಕಡಿಮೆಯಾದಾಗ ಮುಂದಿನ ದಿನಗಳಲ್ಲಿ ಅದ್ಧೂರಿ ಆಚರಣೆ ಮಾಡಿಕೊಳ್ಳೋಣ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸೇವಾಲಾಲ್ ಜಯಂತಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸಭೆ ನಿಗದಿಯಾಗಿತ್ತು. ಆದರೆ ವೇಗವಾಗಿ ಹರಡುತ್ತಿರುವ ಕೊರೊನಾದಿಂದಾಗಿ ರಾಜ್ಯದ ಹಲವಾರು ಜಾತ್ರೆಗಳು ರದ್ದಾಗಿವೆ, ಬಂಜಾರ ಸಮುದಾಯದ ಪುಣ್ಯ ಕ್ಷೇತ್ರದಲ್ಲಿ ಬಹಳ ಅದ್ದೂರಿಯಾಗಿ ಜಾತ್ರೆ ಮಾಡಲಾಗುತಿತ್ತು. ಲಕ್ಷಾಂತರ ಮಾಲಾಧಾರಿಗಳು ಕಾಲ್ನಡಿಗೆಯಲ್ಲೇ ಕ್ಷೇತ್ರಕ್ಕೆ ಬರುತಿದ್ದರು. ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿತ್ತು, ಆದರೆ ಕೊರೊನಾ ನಮ್ಮನ್ನು ಕಟ್ಟಿ ಹಾಕಿದೆ. ಆದರೂ ಕ್ಷೇತ್ರದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ ಎಂದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಜಯದೇವ ನಾಯ್ಕ ಮೊದಲಾದವರಿದ್ದರು.