ಬೆಂಗಳೂರು: ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಕಳೆದ ಮಾರ್ಚ್ 16ರಂದು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಟ್ಟು 29 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಕೆ. ಸೋಮಶೇಖರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜಿಸಂಧಾನದಿಂದ 2541 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. 771 ವೈವಾಹಿಕ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ 281 ದಂಪತಿಗಳನ್ನು ಒಂದುಗೂಡಿಸಲಾಗಿದೆ ಎಂದು ತಿಳಿಸಿದ್ದಾರೆ.
3,76,577 ಪ್ರಕರಣಗಳು ಈ ಬಾರಿ ರಾಷ್ಟ್ರೀಯ ಲೋಕ ಅದಾಲತ್ ಗೆ ಶಿಫಾರಸ್ಸು ಆಗಿದ್ದವು. ಇವುಗಳಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ 2,52,277 ಮತ್ತು ವ್ಯಾಜ್ಯ ಪೂರ್ವ 26,48,035 ಸೇರಿದಂತೆ ಒಟ್ಟು 29,00,312 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್ ಪೀಠಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1041 ನ್ಯಾಯ ಪೀಠಗಳು ಅದಾಲತ್ ನಲ್ಲಿ ಕಾರ್ಯನಿರ್ವಹಿಸಿವೆ ಎಂದರು.
4853 ವಾಹನ ಅಪರಾಧ ಪರಿಹಾರ ಪ್ರಕರಣ ಇತ್ಯರ್ಥಪಡಿಸಿ 249 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. 12,563 ಚೆಕ್ ಬೌನ್ಸ್, 3689 ವಿಭಾಗ ದಾವೆ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ.