ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಗೋಹತ್ಯೆ ನಿಷೇಧ ಸೇರಿ 11 ವಿಧೇಯಕಗಳು ಮಂಡನೆಯಾಗಲಿವೆ. ಇಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ, ಶಿವಮೊಗ್ಗ ತಾಲೂಕಿನ ಹುಣಸೋಡು ಸ್ಫೋಟ ಪ್ರಕರಣ, ಖಾತೆ ಹಂಚಿಕೆ, ನಾಯಕತ್ವ ಬದಲಾವಣೆಯ ವದಂತಿ, ವಿಧಾನಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆಯುವ ಸಾಧ್ಯತೆಯಿದೆ.
ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇತ್ತೀಚೆಗೆ ನಿಧನರಾದ ವಿಧಾನಪರಿಷತ್ ಉಪಾಸಭಾಪತಿ ಧರ್ಮೇಗೌಡ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಕೈಗೊಳ್ಳಲಾಗುವುದು ಎನ್ನಲಾಗಿದೆ.