ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಅನೇಕ ಮಾರ್ಗಗಳಲ್ಲಿ ಬಸ್ ಗಳ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಕೆಎಸ್ಆರ್ಟಿಸಿ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಮತ್ತು ಹಳೆ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೇವೆ ಆರಂಭಿಸಲು ಚಿಂತನೆ ನಡೆಸಿದೆ.
ನಾಲ್ಕು ಸಾರಿಗೆ ನಿಗಮಗಳ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ಮಹಿಳಾ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಪ್ರಯಾಣಿಕರು ಹೆಚ್ಚಾಗಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.
ಕಳೆದ ಒಂದು ವರ್ಷದಿಂದ 200ಕ್ಕೂ ಹೆಚ್ಚು ಸುತ್ತುವಳಿ ಹೆಚ್ಚಿಸಲಾಗಿದೆ. ಶಾಲಾ-ಕಾಲೇಜುಗಳ ಮಾರ್ಗದಲ್ಲಿ ಬಸ್ ಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಈ ವರ್ಷ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಮತ್ತು ಹಳೆ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. 500 ಹೊಸ ಬಸ್ ಗಳನ್ನು ನಿಯೋಜಿಸಲಾಗುತ್ತಿದ್ದು, 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಸೇವೆಗೆ ನೇಮಿಸಲಾಗುವುದು ಎಂದು ಹೇಳಲಾಗಿದೆ.