ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಆರೋಗ್ಯ ಇಲಾಖೆ ನೌಕರರಿಗೆ ಬಿಗ್ ಶಾಕ್ ನೀಡಲಾಗಿದ್ದು, ಸೇವಾ ಅವಧಿ ವಿಸ್ತರಿಸುವ ಪ್ರಸ್ತಾವ ತಿರಸ್ಕರಿಸಲಾಗಿದೆ.
ಕೊರೋನಾ ನಿರ್ವಹಣೆಗಾಗಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ 6463 ನೌಕರರ ನೇಮಕ ಮಾಡಿಕೊಳ್ಳಲಾಗಿತ್ತು. ಅವರ ಸೇವಾ ಅವಧಿ ವಿಸ್ತರಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.
ಕೊರೋನಾ ನಾಲ್ಕನೇ ಅಲೆ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ಸೇವಾವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸದ್ಯ ಕೊರೋನಾ ನಿಯಂತ್ರಣದಲ್ಲಿ ಇರುವುದರಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತಿರಸ್ಕರಿಸಿದ್ದಾರೆ.
ಕೊರೋನಾ ಅಲೆ ತೀವ್ರ ಏರಿಕೆ ಕಂಡಿದ್ದ 2020ರ ಜೂನ್ ನಲ್ಲಿ ವೈದ್ಯರು, ಇತರೆ ಸಹಾಯಕ ಸಿಬ್ಬಂದಿಯನ್ನು ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಎರಡನೆಯ ತೀವ್ರಗೊಂಡ ನಂತರ ಅವರ ಸೇವಾವಧಿಯನ್ನು ಮುಂದುವರಿಸಲಾಗಿತ್ತು. ಮೂರನೇ ಅಲೆ ಕಡಿಮೆಯಾಗಿ ಶೇಕಡ 95 ರಷ್ಟು ಜನ ಲಸಿಕೆ ಪಡೆದುಕೊಂಡಿದ್ದಾರೆ. ನಾಲ್ಕನೇ ಅಲೆ ಬರುವ ಬಗ್ಗೆ ಖಚಿತತೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ನಿರ್ವಹಣೆಗೆ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ನೌಕರರ ಸೇವಾ ಅವಧಿ ವಿಸ್ತರಿಸುವ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ ಎಂದು ಹೇಳಲಾಗಿದೆ.