ಶಿವಮೊಗ್ಗ: ಇನ್ನು ಮುಂದೆ ಜನನ/ಮರಣ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ಅಂಚೆಯಣ್ಣನ ಮೂಲಕ ತಲುಪಿಸುವ ವಿಶಿಷ್ಟ ಸೇವೆಯನ್ನು ಶಿವಮೊಗ್ಗ ಅಂಚೆ ವಿಭಾಗದಲ್ಲಿ ಪರಿಚಯಿಸಲಾಗಿದೆ.
ಭಾರತೀಯ ಅಂಚೆ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ವಿಶಿಷ್ಟ ಸೇವೆಗೆ ಚಾಲನೆ ನೀಡಲಾಗಿದೆ.
ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿನಲ್ಲಿ ಪಡೆಯಲು ಮಹಾನಗರ ಪಾಲಿಕೆ ಜನನ/ಮರಣ ಕೌಂಟರ್ ನಲ್ಲಿ ನಿಗದಿತ ನಮೂನೆ ಅರ್ಜಿ ಪಡೆದು, ನಿಮ್ಮ ವಿಳಾಸವನ್ನು ನಮೂದಿಸಿ ಕೋರಿಕೆಯನ್ನು ಸಲ್ಲಿಸಬಹುದಾಗಿದೆ. ಪ್ರಮಾಣ ಪತ್ರವನ್ನು ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುವುದು. ವಿಳಾಸದಾರರು ಬಟಾವಡೆಯ ಸಮಯದಲ್ಲಿ 80 ರೂ. ಪಾವತಿಸಿ ಜನನ/ಮರಣ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ ಎಂದು ಶಿವಮೊಗ್ಗ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ. ಜಿ. ತಿಳಿಸಿದ್ದಾರೆ.