ನೋಯಿಡಾದ ಮಾಲ್ ಒಂದರಲ್ಲಿ ರೆಸ್ಟೋರೆಂಟ್ ಒಂದು ತನ್ನ ಗ್ರಾಹಕರಿಗೆ ಊಟದ ಐಟಂಗಳಿಗೆ ಚಾರ್ಜ್ ಮಾಡಿದ ಮೇಲೆ ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಗ್ರಾಹಕರಿಗೆ 970ರೂ.ಗಳ ಹೆಚ್ಚುವರಿ ಬಿಲ್ ಮಾಡಿದ ವಿಚಾರವನ್ನು ಗಮನಕ್ಕೆ ತೆಗೆದುಕೊಂಡಿರುವ ಗ್ರಾಹಕ ವ್ಯವಹಾರಗಳ ಇಲಾಖೆ ಈ ಸಂಬಂಧ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್ ಸಂಘಕ್ಕೆ (ಎನ್‌ಆರ್‌ಎಐ) ಪತ್ರ ಬರೆದಿದೆ.
’ಸರ್ವೀಸ್ ಶುಲ್ಕಗಳು ಗ್ರಾಹಕರಿಗೆ ಐಚ್ಛಿಕವಾಗಿದ್ದು, ಅವುಗಳನ್ನು ಅವರ ಮೇಲೆ ಹೇರಬೇಡಿ, ಅದರಲ್ಲೂ ಗ್ರಾಹಕರಿಗೆ ರೆಸ್ಟೋರೆಂಟ್ ಸೇವೆಗಳ ಕುರಿತು ಸಮಾಧಾನವಾಗದೇ ಇದ್ದಂಥ ಸಂದರ್ಭದಲ್ಲಿ, ಅದೂ ಈ ಸೇವಾ ಶುಲ್ಕವನ್ನು ಬಿಲ್‌ನಿಂದ ತೆಗೆದು ಹಾಕಲು ಗ್ರಾಹಕರು ಕೇಳಿದ ಮೇಲೂ ಹೀಗೆ ಮಾಡುವುದು ಸರಿಯಲ್ಲ. ತಮಗೆ ದೊರೆತ ಸೇವೆಯ ಗುಣಮಟ್ಟದಿಂದ ಗ್ರಾಹಕರಿಗೆ ಖುಷಿಯಾದರೆ ಅವರೇ ಸ್ವಯಿಚ್ಛೆಯಿಂದ ಕೊಡುವ ಟಿಪ್ಸ್‌ನಂತೆಯೇ ಈ ಸೇವಾ ಶುಲ್ಕ ಎಂದು ನೀವು ಪರಿಗಣಿಸಬೇಕು,” ಎಂದು ಪತ್ರದಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಬರೆದಿದ್ದಾರೆ.
ಸೋಮವಾರದಂದು ನೋಯಿಡಾದ ಸೆಕ್ಟರ್ 75ರಲ್ಲಿರುವ ಸ್ಪೆಕ್ಟ್ರಮ್ ಮಾಲ್‌ನ ರೆಸ್ಟೋರೆಂಟ್ ಒಂದರ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಸರ್ವೀಸ್ ಚಾರ್ಜ್ ವಿಚಾರವಾಗಿ ಜಗಳ ನಡೆದ ವಿಡಿಯೋವೊಂದು ವೈರಲ್ ಆಗಿತ್ತು.
ಸರ್ವೀಸ್ ಶುಲ್ಕಗಳನ್ನು ಕಡ್ಡಾಯಗೊಳಿಸಬೇಕೇ ಬೇಡವೇ ಎಂಬ ವಿಚಾರವಾಗಿ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.