ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ 600 ರೂ. ರಾಜ್ಯ ಸರ್ಕಾರಗಳಿಗೆ 400 ರೂ. ದರದಲ್ಲಿ ನೀಡಲಾಗುತ್ತದೆ.
ಪ್ರತಿ ಡೋಸ್ ಲಸಿಕೆ ಗೆ ಖಾಸಗಿ ಆಸ್ಪತ್ರೆಗಳಿಂದ 600 ರೂ. ಪಡೆಯಲಾಗುತ್ತದೆ. ಅದೇ ರೀತಿ ರಾಜ್ಯಸರ್ಕಾರಗಳಿಗೆ 400 ರೂ.ಗೆ ನೀಡುವುದಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ. ದೇಶದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಚುರುಕುಗೊಳಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಲಾಗಿದೆ.
ಮೇ 1 ರಿಂದ ವಯಸ್ಕರಿಗೆ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ. ಜನವರಿ 16 ರಂದು ದೇಶಾದ್ಯಂತ ವ್ಯಾಕ್ಸಿನೇಷನ್ ಗೆ ಚಾಲನೆ ನೀಡಲಾಯಿತು. ಆರಂಭದಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯ ಫೆಬ್ರವರಿ 2 ರಿಂದ ಶುರುವಾಗಿ, ಮಾರ್ಚ್ 1 ರಿಂದ 65 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಶುರುವಾಗಿದೆ.
ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. 18 ವರ್ಷ ಮೇಲಿನ ಎಲ್ಲರಿಗೂ ಮೇ 1 ರಿಂದ ಲಸಿಕೆ ನೀಡಲಾಗುವುದು. ಇನ್ನು 4 -5 ತಿಂಗಳ ನಂತರ ಚಿಲ್ಲರೆ ಮುಕ್ತ ಮಾರುಕಟ್ಟೆಯಲ್ಲಿಯೂ ಕೊರೋನಾ ಲಸಿಕೆ ಸಿಗಲಿದೆ.
ತಯಾರಾದ ಶೇಕಡ 50 ರಷ್ಟು ಲಸಿಕೆಯನ್ನು ಭಾರತ ಸರ್ಕಾರದ ವ್ಯಾಕ್ಸಿನೇಷನ್ ಕಾರ್ಯಕ್ಕೆ ನೀಡಲಿದ್ದು, ಉಳಿದ 50 ರಷ್ಟನ್ನು ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೀಡುವುದಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.