alex Certify ಸೀರಿಯಲ್ ಕಿಲ್ಲರ್ ಭೀತಿ: ಇಂದಿರಾನಗರದಲ್ಲಿ ಚೂರಿ ಇರಿತ ಪ್ರಕರಣ, ಪೊಲೀಸರಿಂದ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರಿಯಲ್ ಕಿಲ್ಲರ್ ಭೀತಿ: ಇಂದಿರಾನಗರದಲ್ಲಿ ಚೂರಿ ಇರಿತ ಪ್ರಕರಣ, ಪೊಲೀಸರಿಂದ ಸ್ಪಷ್ಟನೆ

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಪುಂಡಾಟ ಮಿತಿಮೀರಿದೆ. ಇಂದಿರಾನಗರದಲ್ಲಿ ರೌಡಿ ಶೀಟರ್ ಒಬ್ಬ ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಕೇವಲ ಐದು ಗಂಟೆಗಳಲ್ಲಿ ನಾಲ್ವರ ಮೇಲೆ ದಾಳಿ ನಡೆಸಲಾಗಿದ್ದು, ಇಬ್ಬರು ಪಾನಿ ಪುರಿ ಮಾರಾಟಗಾರರು ಮತ್ತು ಲಿಫ್ಟ್ ನೀಡಲು ನಿರಾಕರಿಸಿದ್ದಕ್ಕೆ ಇಬ್ಬರು ಹಲ್ಲೆಗೊಳಗಾಗಿದ್ದಾರೆ.

ಹಲ್ಲೆಗೊಳಗಾದವರನ್ನು ಮೋಟಪ್ಪನಪಾಳ್ಯದ ನಿವಾಸಿ ಮತ್ತು ಪ್ರಯಾಗರಾಜ್‌ನ 24 ವರ್ಷದ ದೀಪಕ್ ಕುಮಾರ್ ವರ್ಮಾ, ಇಂದಿರಾನಗರದ ಅಪ್ಪಾ ರೆಡ್ಡಿ ಪಾಳ್ಯದ ನಿವಾಸಿ 44 ವರ್ಷದ ಎಂ. ತಮ್ಮಯ್ಯ, ಮಾಗಡಿ ರಸ್ತೆಯ ಚೋಳರಪಾಳ್ಯದ 24 ವರ್ಷದ ಎ. ಆದಿಲ್ ಮತ್ತು ಇಂದಿರಾನಗರದ 10 ನೇ ‘ಎ’ ಕ್ರಾಸ್ ನಿವಾಸಿ 19 ವರ್ಷದ ಪಿ. ಜಸವಂತ್ ಎಂದು ಗುರುತಿಸಲಾಗಿದೆ. ವರ್ಮಾ ಮತ್ತು ತಮ್ಮಯ್ಯ ಪಾನಿ ಪುರಿ ಮಾರಾಟಗಾರರಾಗಿದ್ದಾರೆ.

ಶನಿವಾರ ರಾತ್ರಿ ಜಸ್ವಂತ್, ಶುದ್ಧ ನೀರಿನ ಘಟಕದಿಂದ ನೀರು ತರಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಅವರನ್ನು ತಡೆದಿದ್ದ ಆರೋಪಿ ಕದಂಬ, ದ್ವಿಚಕ್ರ ವಾಹನದ ಹಿಂದೆ ಕುಳಿತು ನಾನು ಹೇಳಿದ ಕಡೆಗೆ ಹೋಗಬೇಕು ಎಂದಿದ್ದ. ಇದಕ್ಕೆ ಒಪ್ಪದ ಜಸ್ವಂತ್‌ ಕುತ್ತಿಗೆಗೆ ಇರಿದು ಬೈಕ್‌ನಿಂದ ಇಳಿದು ಓಡಿದ್ದ.

ನಂತರ ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಪಾನಿಪೂರಿ ಅಂಗಡಿ ಬಳಿ ತೆರಳಿದ್ದ ಆರೋಪಿ, ಪಾನಿಪೂರಿ ನೀಡುವಂತೆ ಕೇಳಿದ್ದು, ‘ಪಾನಿಪೂರಿಯ ಮಸಾಲೆ ಖಾಲಿಯಾಗಿದೆ’ ಎಂದ ಮಾರಾಟಗಾರ ವರ್ಮಾ ಅವರ ಕುತ್ತಿಗೆಗೆ ಇರಿದಿದ್ದ.

ಬಳಿಕ ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ ತಮ್ಮಯ್ಯ ಅವರ ಪಾನಿಪೂರಿ ಅಂಗಡಿಗೆ ಹೋಗಿರುವ ಆರೋಪಿ, ಅವರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

ತಡರಾತ್ರಿ 80 ಅಡಿ ರಸ್ತೆಯಲ್ಲಿ ಡೆಲಿವರಿ ಬಾಯ್‌ ಆದಿಲ್‌ ಬೈಕ್‌ ಅಡ್ಡಗಟ್ಟಿದ್ದ ಕದಂಬ, ಕೆ.ಆರ್‌. ಪುರ ರೈಲ್ವೆ ನಿಲ್ದಾಣಕ್ಕೆ ಬಿಡುವಂತೆ ಕೇಳಿದ್ದ. ಡ್ರಾಪ್‌ ಕೊಡಲು ನಿರಾಕರಿಸಿದ್ದಕ್ಕೆ ಆದಿಲ್‌ ಕುತ್ತಿಗೆ ಹಾಗೂ ಕೈಗೆ ಇರಿದು, ಮೊಬೈಲ್‌ ಕಸಿದು ಬೈಕ್‌ ಸಮೇತ ಪರಾರಿಯಾಗಿದ್ದಾನೆ.

ಘಟನೆ ಬೆನ್ನಲ್ಲೇ ಇಂದಿರಾನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸೀರಿಯಲ್‌ ಕಿಲ್ಲರ್‌ ಆಗಮಿಸಿದ್ದಾನೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಇಂದಿರಾನಗರ ಪೊಲೀಸರು ಸ್ಪಷ್ಟನೆ ನೀಡಿದ್ದು, ನಗರದಲ್ಲಿ ಯಾವೊಬ್ಬ ಸೀರಿಯಲ್‌ ಕಿಲ್ಲರ್‌ ಇಲ್ಲ. ಇದು ರೌಡಿಶೀಟರ್‌ ಕದಂಬನ ಕೃತ್ಯ ಎಂದು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಕ್ರಮ ವಹಿಸಲಾಗಿದೆ. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...