
ಬೆಂಗಳೂರು: 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ತನಿಖೆ ನಡೆಸಿ ಪೊಲೀಸ್ ಇಲಾಖೆ ನೀಡಿದ ವರದಿ ಪರಿಶೀಲನೆಗೆ ಉನ್ನತ ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ತ್ರಿ ಸದಸ್ಯ ಸಮಿತಿ ರಚಿಸಿ ಆದೇಶಿಸಲಾಗಿದ್ದು, ಮೂರು ತಿಂಗಳೊಳಗೆ ಪರಿಶೀಲನ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಲಾಗಿದೆ. 2021 ರಲ್ಲಿ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, ವಿವಿಧ ವಿಷಯಗಳ ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪೊಲೀಸ್ ಇಲಾಖೆಗೆ ದೂರು ನೀಡಿ ತನಿಖೆಗೆ ವಹಿಸಿದ್ದು, ಅಭ್ಯರ್ಥಿಗಳನ್ನು ತನಿಖೆಗೆ ಒಳಪಡಿಸಿ ಪೊಲೀಸ್ ಇಲಾಖೆ ಉನ್ನತ ಶಿಕ್ಷಣ ಇಲಾಖೆಗೆ 2023ರ ಜುಲೈನಲ್ಲಿ ವರದಿ ಸಲ್ಲಿಸಿದೆ. ಈ ವರದಿ ಸಲ್ಲಿ ಪರಿಶೀಲನೆಗಾಗಿ ಉನ್ನತ ಶಿಕ್ಷಣ ಇಲಾಖೆ ಪ್ರತ್ಯೇಕ ಸಮಿತಿ ರಚಿಸಿದೆ.
ತನಿಖಾ ವರದಿಗೆ ಮೊದಲೇ ಪ್ರಾಧಿಕಾರ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಪಟ್ಟಿ ತಡೆ ಹಿಡಿದು ತನಿಖೆಗೆ ವಹಿಸಲಾಗಿದೆ.