ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಹಾಗೂ ತಾಳಮದ್ದಲೆ ಅರ್ಥದಾರಿ ಕುಂಬ್ಳೆ ಶ್ರೀಧರರಾವ್(76) ಹೃದಯಾಘಾತದಿಂದ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ಎಂಬಲ್ಲಿ ಅವರು ವಾಸಿಸುತ್ತಿದ್ದರು. ಮೂಲತಃ ಕಾಸರಗೋಡು ಜಿಲ್ಲೆ ಕುಂಬ್ಳೆಯವರಾದ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರರಾಗಿದ್ದ ಕುಂಬ್ಳೆ ಶ್ರೀಧರ್ ರಾವ್ ನಿವೃತ್ತ ಶಿಕ್ಷಕಿ ಪತ್ನಿ ಸುಲೋಚನಾ, ಪುತ್ರರಾಗಿರುವ ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್, ದೇವಿ ಪ್ರಸಾದ್ ಸೇರಿ ಅಪಾರ ಬಂಧು ಬಳಗ ಆಗಲಿದ್ದಾರೆ.
ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಆರು ದಶಕಕ್ಕೂ ಅಧಿಕ ಕಾಲ ಕಲಾ ಸೇವೆ ಮಾಡಿದ್ದ ಶ್ರೀಧರ್ ರಾವ್ ಅವರು ಧರ್ಮಸ್ಥಳ ಮೇಳದಲ್ಲಿ ನಿರಂತರ 50 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸ್ತ್ರೀವೇಶ, ಪುರುಷ ವೇಶ ಎರಡರಲ್ಲಿಯೂ ಅವರು ಪ್ರಸಿದ್ಧರಾಗಿದ್ದರು. ಈಶ್ವರ, ಸೀತೆ, ಲಕ್ಷ್ಮಣ, ಲಕ್ಷ್ಮಿ, ವಿಷ್ಣು, ಭೀಷ್ಮ ಮೊದಲಾದ ಪಾತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು.