ಕಾಬೂಲ್ನ ಮಿಲಿಟರಿ ಆಸ್ಪತ್ರೆಯ ಮೇಲೆ ನಿನ್ನೆ ನಡೆದ ಬಾಂಬ್ ದಾಳಿಯಲ್ಲಿ ಹಿರಿಯ ತಾಲಿಬಾನ್ ಮಿಲಿಟರಿ ಕಮಾಂಡರ್ ಹಮ್ದುಲ್ಲಾ ಮೊಖ್ಲಿಸ್ ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆ ಹೊತ್ತಿದೆ.
ಮೃತ ಮೊಖ್ಲಿಸ್ ತಾಲಿಬಾನ್ ಅಫ್ಘಾನಿಸ್ತಾನದ ಅಧಿಕಾರ ವಹಿಸಿಕೊಂಡ ಬಳಿಕ ಹತರಾದ ಹಕ್ಕಾನಿ ನೆಟ್ವರ್ಕ್ನ ಸದಸ್ಯ ಹಾಗೂ ಹಿರಿಯ ಅಧಿಕಾರಿಯಾಗಿದ್ದಾರೆ.
ಅಶ್ರಫ್ ಘನಿ ನೇತೃತ್ವದ ಸರ್ಕಾರವನ್ನು ಪತನಗೊಳಿಸಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡೆಸಿಕೊಂಡ ಬಳಿಕ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ವರದಿಯಾಗಿದೆ.
ದಾಳಿ ವಿಚಾರವಾಗಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್, ಇಸ್ಲಾಮಿಕ್ ಸ್ಟೇಟ್ಸ್ ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರು, ವೈದ್ಯರು ಹಾಗೂ ರೋಗಿಗಳನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಿತ್ತು. ದಾಳಿ ನಡೆದ 15 ನಿಮಿಷಗಳಲ್ಲಿ ತಾಲಿಬಾನ್ ಪಡೆ ಇಸ್ಲಾಮಿಕ್ ಸ್ಟೇಟ್ನ್ನು ಹಿಮ್ಮೆಟ್ಟಿಸಿದೆ ಎಂದು ಹೇಳಿದ್ದಾರೆ.
ಆಸ್ಪತ್ರೆ ಪ್ರವೇಶ ದ್ವಾರದ ಬಳಿ ಆತ್ಮಹತ್ಯಾ ಬಾಂಬರ್ ಸ್ಪೋಟಕಗಳನ್ನು ಸ್ಫೋಟಿಸಿದ ಬಳಿಕ ಈ ದಾಳಿ ನಡೆದಿದೆ. ಬಂಧೂಕುದಾರಿಗಳು ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುತ್ತಾ ಆಸ್ಪತ್ರೆ ಒಳಕ್ಕೆ ನುಗ್ಗಿದ್ದಾರೆ. ದಾಳಿಯಲ್ಲಿ 19 ಮಂದಿ ಸಾವನ್ನಪ್ಪಿದ್ದರೆ 50 ಮಂದಿ ಗಾಯಗೊಂಡಿದ್ದಾರೆ.