ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರಿಗೆ ಸಕಾಲದಲ್ಲಿ ಸೂಕ್ತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2011ರ ಜನಗಣತಿಯ ಪ್ರಕಾರ 57.91 ಲಕ್ಷ ಹಿರಿಯ ನಾಗರೀಕರಿದ್ದು, ನಾನಾ ಕಾರಣಗಳಿಂದ ಕೆಲವು ಹಿರಿಯ ನಾಯಕ ನಾಗರೀಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಸರ್ಕಾರದಿಂದ ಹಲವು ಸಬಲೀಕರಣ ಕಾರ್ಯಕ್ರಮ ಜಾರಿಗೆ ತರಲಾಗಿದ್ದು, 30 ಜಿಲ್ಲೆಗಳಲ್ಲಿ ನಿರ್ಗತಿಕ ಹಿರಿಯ ನಾಗರಿಕರ ವೃದ್ಧಾಶ್ರಮಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ಇವುಗಳ ನಿರ್ವಹಣೆಗೆ ವಾರ್ಷಿಕವಾಗಿ ನೀಡುತ್ತಿದ್ದ ಮೊತ್ತವನ್ನು 8 ಲಕ್ಷದಿಂದ 12 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.
30 ಜಿಲ್ಲೆಗಳಲ್ಲಿ ಹಗಲು ಯೋಗ ಕ್ಷೇಮ ಕೇಂದ್ರ ಸ್ಥಾಪಿಸಲಾಗಿದೆ. ಹಿರಿಯ ನಾಗರಿಕರ ಸಾಮಾಜಿಕ ಭದ್ರತೆಗಾಗಿ ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗಾಗಿ ಗುರುತಿನ ಚೀಟಿ ಯೋಜನೆ ಸಹಾಯವಾಣಿ ಆರಂಭಿಸಲಾಗಿದ್ದು, 20 ಜಿಲ್ಲೆಗಳಲ್ಲಿ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.