ನವದೆಹಲಿ : ಅಮೆಜಾನ್ ಕಂಪನಿಯು ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರಸಾದದ ಹೆಸರಿನಲ್ಲಿ ಸಿಹಿ ತಿಂಡಿ ಮಾರಾಟ ಮಾಡುತ್ತಿದೆ ಎನ್ನಲಾಗಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ಪ್ರಸಾದದ ಹೆಸರಿನಲ್ಲಿ ಸಿಹಿ ತಿಂಡಿ ಮಾರಾಟ ಮಾಡಿದ ಹಿನ್ನೆಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಇ-ಕಾಮರ್ಸ್ ದೈತ್ಯ ಅಮೆಜಾನ್ ಗೆ ನೋಟಿಸ್ ನೀಡಿದೆ.
ಅಮೆಜಾನ್ ಸೋಗಿನಲ್ಲಿ ಸಿಹಿತಿಂಡಿಗಳ ಮಾರಾಟವನ್ನು ಒಳಗೊಂಡ ಮೋಸದ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಆರೋಪಿಸಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸರ್ಕಾರದ ಅಡಿಯಲ್ಲಿನ ನಿಯಂತ್ರಣ ಪ್ರಾಧಿಕಾರವು ಈ ಕ್ರಮ ಕೈಗೊಂಡಿದೆ .
ಗ್ರಾಹಕ ಪ್ರಾಧಿಕಾರವು ಏಳು ದಿನಗಳಲ್ಲಿ ಅಮೆಜಾನ್ ನಿಂದ ಪ್ರತಿಕ್ರಿಯೆಯನ್ನು ಕೋರಿದೆ ಮತ್ತು ಉತ್ತರವನ್ನು ನೀಡಲು ವಿಫಲವಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ.
ನೋಟಿಸ್ ಗೆ ಅಮೆಜಾನ್ ಕೂಡ ಪ್ರತಿಕ್ರಿಯೆ ನೀಡಿದ್ದು, “ಕಾನೂನಾತ್ಮಕವಾಗಿಯೇ ಉತ್ಪನ್ನಗಳನ್ನು ಮಾಡುವುದು ಅಮೆಜಾನ್ ನೀತಿಯಾಗಿದೆ. ನಮ್ಮ ನೀತಿಗೆ ವಿರುದ್ಧವಾಗಿ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಅಮೆಜಾನ್ ವಕ್ತಾರರೊಬ್ಬರು ಸ್ಪಷ್ಟನೆ ನೀಡಿದ್ದಾರೆ.