
ಬೆಂಗಳೂರು: ಉತ್ತರ ಪ್ರದೇಶದ ಶೇಕಡ 12ರಷ್ಟು ರೋಗಗಳಿಗೆ ಗಂಗಾ ನದಿಯ ಕಲುಷಿತ ನೀರು ಮೂಲ ಕಾರಣವೆಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಉತ್ತರ ಪ್ರದೇಶದ ಸಂಸ್ಥೆಗಳೇ ಹೇಳಿವೆ. ಹೀಗಿರುವಾಗ ಖಾಸಗಿ ಸಂಸ್ಥೆಗಳು ಗಂಗಾಜಲವನ್ನು ವಾಣಿಜ್ಯೀಕರಣ ಮಾಡಿ ಮಾರಾಟ ಮಾಡುತ್ತಿರುವುದು ಮತ್ತು ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುವುದನ್ನು ಟೀಕಿಸಿದ್ದೇನೆ ಎಂದು ಗ್ರಾಮೀಣಾಅವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗಂಗಾ ಜಲ ಮಾಲಿನ್ಯದ ಕುರಿತ ವರದಿ ಮತ್ತು 100 ಎಂಎಲ್ ಗಂಗಾಜಲವನ್ನು 69ರೂ. ಗೆ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ನಾನು ಗಂಗಾಜಲದ ಮಾಲಿನ್ಯದ ಕುರಿತಾಗಿ ಮಾತನಾಡುತ್ತಿಲ್ಲ. ತ್ರಿವೇಣಿ ಸಂಗಮದಲ್ಲಿ ಮುಳುಗುವುದಕ್ಕೆ ನನ್ನ ಆಕ್ಷೇಪವಿಲ್ಲ. ಯಾರಾದರೂ ಹೋಗಿ ಗಂಗಾ ಸ್ನಾನ ಮಾಡಿ ಅವರ ಪಾಪ ತೊಳೆದುಕೊಳ್ಳಬಹುದು. ಆದರೆ, ಕೇಂದ್ರ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಉತ್ತರ ಪ್ರದೇಶದ ಸಂಸ್ಥೆಗಳು ಹೇಳಿರುವ ಮಾಹಿತಿಯನ್ನೇ ನಾನು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿನ ಶೇಕಡ 12ರಷ್ಟು ರೋಗಗಳಿಗೆ ಗಂಗಾನದಿ ಕಲುಷಿತ ನೀರು ಮೂಲ ಕಾರಣವೆಂದು ವರದಿಗಳು ಹೇಳಿವೆ. ಇದನ್ನು ಕುಂಭಮೇಳಕ್ಕೂ ಮೊದಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಕುಂಭಮೇಳ ನಡೆಯುವ ಅವಧಿಯಲ್ಲಿ ನೀರಿನ ಮಾದರಿಗಳ ಪರೀಕ್ಷಾ ವರದಿಗಳು ಇದೇ ರೀತಿ ಬಂದಿದೆ. ನೀರಿನಲ್ಲಿ ಮನುಷ್ಯರ, ಪ್ರಾಣಿಗಳ ಹೊಲಸು ತೇಲುತ್ತಿದೆ. ಇದು ಸ್ನಾನ ಮಾಡಲು ಯೋಗ್ಯವಲ್ಲ ಎಂದು ಅವರೇ ಹೇಳಿದ್ದಾರೆ. ಹೀಗಿರುವಾಗ ಆ ನೀರನ್ನು ವಾಣಿಜ್ಯೀಕರಣ ಮಾಡಿ ಮಾರಾಟ ಮಾಡುತ್ತಿರುವುದನ್ನು ನಿಯಂತ್ರಿಸುವವರು ಯಾರು? ಸುಮಾರು 64 ಕೋಟಿ ಜನ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅದರಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಯಾರಾದರೂ ಮಾತನಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.