ಬೆಂಗಳೂರು : ಕೇಂದ್ರ ಸರ್ಕಾರ ‘ಭಾರತ್ ಬ್ರ್ಯಾಂಡ್’ ಹೆಸರಲ್ಲಿ kgಗೆ ₹29 ರಂತೆ ಅಕ್ಕಿ ಮಾರಾಟ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಗಾಗಿ ಇದೇ ಅಕ್ಕಿಯನ್ನು ನಾವು kgಗೆ ₹34 ರಂತೆ ಕೊಡುವಂತೆ ಕೇಳಿದ್ದೆವು. ಆಗ ದಾಸ್ತಾನು ಇಲ್ಲ ಎಂದು ಕಾರಣ ಕೊಟ್ಟಿದ್ದ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿತ್ತು. ಈಗ ಅದೇ ಅಕ್ಕಿಯನ್ನು 29 ದರ ನಿಗದಿ ಮಾಡಿ ಬೀದಿಯಲ್ಲಿ ಮಾರಾಟ ಮಾಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಹಣ ನೀಡುತ್ತೀವಿ ಎಂದರೂ ದಾಸ್ತಾನಿನ ನೆಪ ಹೇಳಿದ್ದ ಕೇಂದ್ರಕ್ಕೆ ಈಗ ಅಕ್ಕಿ ಬಂದಿದ್ದು ಎಲ್ಲಿಂದ.? ಕೇವಲ ಆರು ತಿಂಗಳ ಅವಧಿಯಲ್ಲಿ ಮೋದಿಯವರು ಗದ್ದೆ ಉಳುಮೆ ಮಾಡಿ ದೇಶಕ್ಕಾಗುವಷ್ಟು ಅಕ್ಕಿ ಬೆಳೆದರೆ.? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
‘ಭಾರತ್ ಬ್ರ್ಯಾಂಡ್’ ಹೆಸರಿನಲ್ಲಿ ಈಗ ಪ್ರತಿ ಕೆಜಿ ಅಕ್ಕಿಗೆ ಕೇಂದ್ರ ₹ 29 ನಿಗದಿ ಪಡಿಸಿದೆ. ಆದರೆ ನಾವು ಇದೇ ಅಕ್ಕಿಯನ್ನು ₹34ಕ್ಕೆ ಖರೀದಿಸಿ ಬಡವರಿಗೆ ಉಚಿತವಾಗಿ ನೀಡುತ್ತಿದ್ದೆವು. ನಾವು ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ಟರೆ ತಮ್ಮ ಜನಪ್ರಿಯತೆ ಎಲ್ಲಿ ಕುಸಿಯುತ್ತದೊ ಎಂಬ ಹೊಟ್ಟೆಕಿಚ್ಚಿನಿಂದ ಬಡವರ ಅನ್ನಕ್ಕೂ ಮೋದಿಯವರು ಕಲ್ಲು ಹಾಕಿದ್ದರು. ಈಗ ಉಚಿತವಾಗಿ ಕೊಡಬೇಕಾದ ಅಕ್ಕಿಯನ್ನು ಹಾದಿ ಬೀದಿಯಲ್ಲಿ ದುಡ್ಡಿಗೆ ಮಾರುತ್ತಿದ್ದಾರೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡದೇ ಇದ್ದದ್ದು ಕೂಡ ನಮ್ಮ ರಾಜ್ಯಕ್ಕೆ ಎಸಗಿದ ಅನ್ಯಾಯದ ಸರಣಿಗಳಲ್ಲಿ ಒಂದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.