ಉತ್ತರ ಪ್ರದೇಶ : ಕಂತೆ ಕಂತೆ ಹಣದೊಂದಿಗೆ ಪೊಲೀಸ್ ಅಧಿಕಾರಿಯ ಕುಟುಂಬ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಪೊಲೀಸ್ ಅಧಿಕಾರಿಗೆ ಈಗ ಸಂಕಷ್ಟ ಎದುರಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರ ಹೆಂಡತಿ ಮತ್ತು ಮಕ್ಕಳು, 500 ರೂ ಮುಖಬೆಲೆಯ ನೋಟುಗಳ ಕಂತೆಗಳನ್ನು ಮಂಚದ ಮೇಲೆ ಹರವಿಕೊಂಡಿದ್ದಾರೆ. ನಂತರ ಅದನ್ನು ತೋರ್ಪಡಿಕೆ ಮಾಡಲೆಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇರಲಾರದೇ ಇರುವೆ ಬಿಟ್ಟು ಕೊಂಡವರ ಹಾಗೆ ಆಗಿದೆ ಈ ಪೊಲೀಸ್ ಅಧಿಕಾರಿಯ ಕುಟುಂಬದ ಕಥೆ.
ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸ್ ಅಧಿಕಾರಿಯ ಪತ್ನಿ , ಮಕ್ಕಳೊಂದಿಗೆ ಹಣದ ಕಟ್ಟುಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಘಟನೆಯ ಪರಿಣಾಮವಾಗಿ ಸ್ಟೇಷನ್ ಉಸ್ತುವಾರಿ ರಮೇಶ್ ಚಂದ್ರ ಸಹಾನಿ ಅವರನ್ನು ತಕ್ಷಣ ವರ್ಗಾವಣೆ ಮಾಡಲಾಗಿದ್ದು, ಆತನ ವಿರುದ್ಧವೂ ತನಿಖೆ ಆರಂಭಿಸಲಾಗಿದೆ.
ಪೊಲೀಸ್ ಅಧಿಕಾರಿಯ ಪತ್ನಿ ಮತ್ತು ಇಬ್ಬರು ಮಕ್ಕಳು ದೊಡ್ಡ ಮೊತ್ತದ ಹಣದ ರಾಶಿಯೊಂದಿಗೆ ಹಾಸಿಗೆಯ ಮೇಲೆ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಹಿರಿಯ ತನಿಖಾಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ” ಅಧಿಕಾರಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೋಲೀಸ್ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಕಂತೆ ಕಂತೆ ನೋಟುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ’ ಎಂದು ಹೇಳಿದರು.