ಉಡುಪಿ: ಉಡುಪಿ-ಚಿಕ್ಕಮಗಳೂರು ಭಾಗದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಸಚಿವರೂ ಆಗಿರುವ ಶೋಭಾ ಕರಂದ್ಲಾಜೆ ವಿರುದ್ಧ ಸೆಲ್ಫಿ ವಿಥ್ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಭಟನೆ ನಡೆಸಲಾಗುತ್ತಿದೆ. ಉಡುಪಿಯಿಂದ ಮಲ್ಪೆವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಮಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ವಿಜೇತ 5 ಜನರಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಜೊತೆಗೆ ಸೆಲ್ಫಿ ತೆಗೆದು ಕಳುಹಿಸುವ ವಿಶೇಷ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 6 ರಿಂದ 14ರವರೆಗೆ ಉಡುಪಿ, ಕಾಪು, ಕುಂದಾಪುರದಲ್ಲಿ ಶೋಭಾ ಕರಂದ್ಲಾಜೆ ಜೊತೆ ಸೆಲ್ಫಿ ತೆಗೆದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಬೇಕು. ಅಕ್ಟೋಬರ್ 14ರವರೆಗೂ ಶೋಭಾ ಕರಂದ್ಲಾಜೆ ಉಡುಪಿಗೆ ಬಾರದಿದ್ದರೆ ಎಲ್ಲಾ ಠಾಣೆಗಳಲ್ಲಿ ನಾಪತ್ತೆ ದೂರು ದಾಖಲಿಸುತ್ತೇವೆ. ಉಡುಪಿ ಫ್ಲೈಓವರ್ ಮೇಲೆ ಶೋಭಾ ಕರಂದ್ಲಾಜೆ ಫೋಟೋ ಅಂಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.