ಸ್ವಯಂಘೋಷಿತ ದೇವಮಾನವನೊಬ್ಬ ದುಷ್ಟ ಆತ್ಮಗಳನ್ನ ಓಡಿಸುತ್ತೇನೆ ಎಂದು ಮಹಿಳೆಯೊಬ್ಬರಿಂದ 32 ಲಕ್ಷ ರೂಪಾಯಿ ಪಡೆದುಕೊಂಡು, ವಂಚಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ವರದಿಯಾಗಿದೆ.
ಈ ಬಗ್ಗೆ ಡೊಂಬಿವಿಲಿಯ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ನಿವಾಸಿ ಬಾಬನ್ ಬಾಬುರಾವ್ ಪಾಟೀಲ್ ಎಂದು ಗುರುತಿಸಲಾಗಿದೆ.
ತನ್ನನ್ನು ತಾನು ದೇವಮಾನವ ಎಂದು ಹೇಳಿಕೊಂಡಿರುವ ಬಾಬನ್, ದೂರುದಾರರ ಕುಟುಂಬದಿಂದ ದುಷ್ಟಶಕ್ತಿಗಳನ್ನು ಮತ್ತು ಆತ್ಮಗಳನ್ನು ಓಡಿಸುವುದಾಗಿ ಭರವಸೆ ನೀಡಿದ್ದರು. ಈ ಕಾರ್ಯಸಾಧನೆಗಾಗಿ ಡಿಸೆಂಬರ್ 2019 ರಿಂದ ಕಾಲಕಾಲಕ್ಕೆ ಲಕ್ಷಾಂತರ ಹಣದ ಬೇಡಿಕೆಯಿಟ್ಟಿದ್ದರು.
ಹೀಗೆ ಆ ಕುಟುಂಬದಿಂದ 31.60 ಲಕ್ಷ ರೂ. ಹಣದ ಜೊತೆಗೆ ಇತರ ದುಬಾರಿ ವಸ್ತುಗಳನ್ನು ತೆಗೆದುಕೊಂಡಿದ್ದಾನೆ. ಆದರೆ ಅವರ ಕುಟುಂಬಕ್ಕಿದ್ದ ಆತ್ಮಗಳ ಸಮಸ್ಯೆಯನ್ನು ಪರಿಹರಿಸಿಲ್ಲ ಎಂದು ವಂಚನೆಗೊಳಗಾದ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ದೂರು ಸ್ವೀಕರಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ವಂಚನೆ), 406 (ನಂಬಿಕೆ ಉಲ್ಲಂಘನೆ(ಕ್ರಿಮಿನಲ್)) ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಜೊತೆಗೆ ಮಾನವಬಲಿ, ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಸೇರಿದಂತೆ ಮಹಾರಾಷ್ಟ್ರದ 2013ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ 2 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.