
ನವದೆಹಲಿ: ದೆಹಲಿಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಮನೆಯನ್ನು ಶೋಧಿಸಿದ ಒಂದು ದಿನದ ನಂತರ ಜಾರಿ ನಿರ್ದೇಶನಾಲಯ(ಇಡಿ) ಸಂಸ್ಥೆ ಮಂಗಳವಾರ 36 ಲಕ್ಷ ರೂ, ಎಸ್‌ಯುವಿ ಮತ್ತು ಕೆಲವು ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ.
ಸೋರೆನ್ ನಾಪತ್ತೆಯಾಗಿದ್ದಾರೆ ಎಂದು ಜಾರ್ಖಂಡ್‌ನಲ್ಲಿ ಪ್ರತಿಪಕ್ಷ ಬಿಜೆಪಿ ಹೇಳಿಕೊಂಡಿದ್ದು, ಸಿಎಂ ತಮ್ಮ ನಿವಾಸದಲ್ಲಿ ಆಡಳಿತಾರೂಢ ಒಕ್ಕೂಟದ ಎಲ್ಲಾ ಶಾಸಕರ ಸಭೆಯನ್ನು ಕರೆದಿದ್ದಾರೆ.
ಸೋಮವಾರ, ಭೂ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಸೋರೆನ್ ಅವರ ದಕ್ಷಿಣ ದೆಹಲಿ ನಿವಾಸಕ್ಕೆ ಇಡಿ ತಂಡವು ಭೇಟಿ ನೀಡಿತ್ತು. ಆದರೆ, ಅವರು ತಮ್ಮ ಮನೆಯಲ್ಲಿ ಇರಲಿಲ್ಲ. ಸುಮಾರು 13 ಗಂಟೆಗಳ ಕಾಲ ಅಲ್ಲಿಯೇ ಬಿಡಾರ ಹೂಡಿದ್ದರು. ಕಾರ್ಯಾಚರಣೆಯಲ್ಲಿ ಇಡಿ ತಂಡಗಳು ಸುಮಾರು 36 ಲಕ್ಷ ರೂಪಾಯಿ ನಗದು, ಹರಿಯಾಣ ನಂಬರ್ ಪ್ಲೇಟ್ ಹೊಂದಿರುವ ಬಿಎಂಡಬ್ಲ್ಯು, ಬೇನಾಮಿ ಹೆಸರಿನಲ್ಲಿ ನೋಂದಾಯಿಸಲಾದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.