ಭೋಪಾಲ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಬೋರ್ ವೆಲ್ ಗೆ ಬಿದ್ದ ಎರಡೂವರೆ ವರ್ಷದ ಬಾಲಕಿಯನ್ನು 51 ಗಂಟೆಗಳ ಬೃಹತ್ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆಯಲಾಗಿದೆ. ಅಧಿಕಾರಿಗಳ ಪ್ರಕಾರ, ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ಷಿಸಲಾಯಿತು. ನಂತರ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದೆ.
ಇಂದು ಮುಂಜಾನೆ, ರೊಬೊಟಿಕ್ ತಜ್ಞರ ತಂಡವು ರಕ್ಷಣಾ ತಂಡದೊಂದಿಗೆ ಮಂಗಳವಾರ 300 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಬಾಲಕಿಯನ್ನು ಹೊರತೆಗೆಯಲು ಸೇರಿಕೊಂಡಿತು. ಸೃಷ್ಟಿ ಎಂಬ ಬಾಲಕಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೋರ್‌ವೆಲ್‌ಗೆ ಬಿದ್ದಿದ್ದಳು. ಆರಂಭದಲ್ಲಿ ಬೋರ್‌ವೆಲ್ ನಲ್ಲಿ ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು. ಆದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯಂತ್ರಗಳಿಂದ ಉಂಟಾದ ಕಂಪನದಿಂದಾಗಿ ಅವಳು ಸುಮಾರು 100 ಅಡಿಗಳಷ್ಟು ಕೆಳಕ್ಕೆ ಜಾರಿದಳು,
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ(ಎಸ್‌ಡಿಇಆರ್‌ಎಫ್) ತಂಡಗಳು ಬಾಲಕಿಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಸೇನಾ ತಂಡವೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು.
51 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಸಿ ಮಗುವನ್ನು ಹೊರತೆಗೆಯಲಾಯಿತು. ಆದರೆ, ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.