
ಶಿವಮೊಗ್ಗ: ಪ್ರಕೃತಿಯನ್ನು ಆರಾಧಿಸುವಂತಹ ರೂಢಿ ಬಂಜಾರ ಸಮುದಾಯದಲ್ಲಿ ಹಿಂದಿನಿಂದಲೂ ಬೆಳೆದು ಬಂದಿದೆ. ಶಿವಮೊಗ್ಗದ ಹೊರಭಾಗದಲ್ಲಿರುವ ಮಲವಗೊಪ್ಪದಲ್ಲಿ ಬಂಜಾರ ಸಮುದಾಯದವರು ವಿಶೇಷವಾಗಿ ಪ್ರಕೃತಿ ಆರಾಧನೆ ಮಾಡಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ವಿಶೇಷವಾಗಿ ಜಡಿ ಮಳೆ ಬೀಳುವ ಅಂದರೆ ಆರಿದ್ರ ಮಳೆಯ ಸಂದರ್ಭದಲ್ಲಿ ಗಾಳಿ, ಮಣ್ಣು, ನೀರು ಹೀಗೆ ಪ್ರಕೃತಿಯಿಂದ ಬರುವಂತಹ ಬೇನೆಗಳು, ಸಾಂಕ್ರಾಮಿಕ ರೋಗಗಳು ಮತ್ತು ತಾಂಡಾಗಳಲ್ಲಿ ವಿಶೇಷವಾಗಿ ಮಕ್ಕಳಿಗೆ ಬರದಂತೆ ದೇವರಲ್ಲಿ ಪ್ರಾರ್ಥಿಸಿ ಮಾಡುವಂತಹ ಹಬ್ಬವೇ ಸೀತ್ಲ ಹಬ್ಬ.
ಸಿತ್ಲಾ ಹಬ್ಬ ಪ್ರಾರಂಭವಾಗುವುದು ತಾಂಡಾದ ಪ್ರತಿ ಮನೆ ಹಾಗೂ ಮನೆಯಲ್ಲಿರುವಂತಹ ಬಟ್ಟೆ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ತೊಳೆದು ಸ್ವಚ್ಛಗೊಳಿಸಿ ಮನೆಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸಿ ಮನೆ ಹಾಗೂ ತಾಂಡಾದಲ್ಲಿರುವ ರೋಗರುಜಿನೆಗಳನ್ನು ಹೊರತೆಗೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಪ್ರಕೃತಿಯ ಸಂಕೇತವಾದ ಅಂಬಾ, ಅಳಲಿ, ಹಿಂಗಳಾ, ದುರ್ಗಾ, ಕಂಕಾಳಿ, ತುಳಜಾ ಮಂತ್ರಾಲ್, ಸಾತಿ ಭವಾನಿ ಯರನ್ನು(ಸಪ್ತ ಮಾತೃಕೆಯರು) ಪೂಜಿಸಲಾಗುತ್ತದೆ.
ತಾಂಡಾದ ಹೊರಭಾಗದಲ್ಲಿ ಸಾತಿ ಭವಾನಿಯರನ್ನು ಪ್ರತಿನಿಧಿಸುವ ಏಳು ಕಲ್ಲುಗಳನ್ನು ಇಟ್ಟು ಇವುಗಳನ್ನು ಅರಿಶಿಣ, ಕುಂಕುಮ ಹೂವುಗಳಿಂದ ಶೃಂಗರಿಸಿ ತಾಂಡಾದವರೆಲ್ಲರೂ ಒಂದೆಡೆ ಸೇರಿ ಕುರಿಯನ್ನು ಕಡಿದು ತಾಂಡಾದ ಎಲ್ಲ ಮನೆಗಳಿಗೂ ಸಮನಾಗಿ ಪಾಲನ್ನು ಹಾಕಿ ಅಂದು ಮನೆಗಳಲ್ಲಿ ಮಾಂಸದ ಊಟವನ್ನು ಮಾಡಲಾಗುತ್ತದೆ.
ಪ್ರತಿ ಮನೆಗಳಿಂದ ಮಹಿಳೆಯರು ಕಡಾಯಿ ಅಂದರೆ ಅಕ್ಕಿಯ ಪಾಯಸ ತಯಾರಿಸಿಕೊಂಡು ಪೂಜಾ ಸಾಮಾನುಗಳೊಂದಿಗೆ ಸಾತಿ ಭವಾನಿಯರಿಗೆ ಪೂಜೆಯನ್ನು ಮಾಡಿಸಿಕೊಂಡು ಬರುತ್ತಾರೆ.
ಸೀತ್ಲ ಹಬ್ಬದಲ್ಲಿ ಮಕ್ಕಳು ಕಳ್ಳಿಯ ಗಿಡಗಳಿಂದ ಅಥವಾ ಇತರೆ ಗಿಡಗಳಿಂದ ಕತ್ತಿಯನ್ನು ತಯಾರಿಸಿ ಅದಕ್ಕೆ ಅರಿಶಿನ ಕುಂಕುಮ ಮತ್ತು ಕಪ್ಪು ಮಸಿ ಬಳಿದು ಶೃಂಗರಿಸಿಕೊಂಡು ಸಾತಿ ಭವಾನಿಯರಿಗೆ ಯಾವುದೇ ರೋಗ ರುಜಿನೆಗಳು ಬರದಂತೆ ಬೇಡಿಕೊಂಡು ಕತ್ತಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಇಡೀ ತಾಂಡಾದ ಮಕ್ಕಳು ತಂದಿರುವ ಬಣ್ಣ ಬಣ್ಣದ ಮರದ ಕತ್ತಿಯನ್ನು ದೇವರ ಬಳಿ ಸುಂದರವಾಗಿ ಇಡಲಾಗುತ್ತದೆ. ಈ ರೀತಿಯಾಗಿ ಪ್ರಕೃತಿಯ ಪೂಜೆಯನ್ನು ಮಾಡುವ ಮೂಲಕ ಸೀತ್ಲ ಹಬ್ಬವನ್ನು ಬಂಜಾರ ಸಮುದಾಯದಲ್ಲಿ ತಲತಲಾಂತರದಿಂದ ಮಾಡಿಕೊಂಡು ಬರಲಾಗುತ್ತಿದೆ.

