ಪಾಕಿಸ್ತಾನದಲ್ಲಿ ಗೋರಿಯಲ್ಲಿರುವ ತಮ್ಮ ಹೆಣ್ಣುಮಕ್ಕಳ ಶವವನ್ನು ರಕ್ಷಿಸಲು ಪೋಷಕರು ಸಮಾಧಿಗೆ ಬೀಗ ಹಾಕಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದರೊಂದಿಗೆ ಸಮಾಧಿಯನ್ನ ಕಬ್ಬಿಣದ ಗ್ರಿಲ್ಸ್ ನಿಂದ ಮುಚ್ಚಿದ್ದು ಬೀಗ ಹಾಕಿದ್ದ ಫೋಟೋ ವೈರಲ್ ಆಗಿತ್ತು.
ಶವ ತೆಗೆದು ಅತ್ಯಾಚಾರ ನಡೆಸಿದ ಪ್ರಸಂಗಗಳು ವರದಿಯಾದ ನಂತರ ಪೋಷಕರು ತಮ್ಮ ಹೆಣ್ಣುಮಕ್ಕಳ ಶವ ರಕ್ಷಣೆಗೆ ಹೀಗೆ ಸಮಾಧಿಗೆ ಬೀಗ ಹಾಕಿದ್ದಾರೆನ್ನಲಾಗಿತ್ತು.ಆದರೆ ಇದು ಸತ್ಯವಲ್ಲ, ಸಮಾಧಿಗೆ ಬೀಗ ಹಾಕಿದ್ದರ ಹಿಂದೆ ಬೇರೊಂದು ಕಥೆ ಇದೆ ಎಂಬುದು ಬಹಿರಂಗವಾಗಿದೆ.
ಅಷ್ಟೇ ಅಲ್ಲ, ಅಸಲಿಗೆ ಈ ಚಿತ್ರ ಪಾಕಿಸ್ತಾನದ್ದಲ್ಲ. ಇಂತಹ ಘಟನೆಯೂ ಪಾಕಿಸ್ತಾನದಲ್ಲಿ ವರದಿಯಾಗಿಲ್ಲ. ವೈರಲ್ ಆಗಿರುವ ಫೋಟೋ ಹೈದರಾಬಾದ್ ನದ್ದು ಎಂಬುದು ಸ್ಪಷ್ಟವಾಗಿದೆ. ಹೈದರಾಬಾದ್ ನಲ್ಲಿ ಸ್ಮಶಾನಗಳ ಕೊರತೆ ಇದೆ ಎಂದು ತಿಳಿದ ವ್ಯಕ್ತಿಯೊಬ್ಬ ತನ್ನ ತಾಯಿಯ ಸಮಾಧಿಯ ಜಾಗದಲ್ಲಿ ಮತ್ತೊಂದು ಶವ ಸಂಸ್ಕಾರ ಮಾಡಬಾರದೆಂದು ಸಮಾಧಿಗೆ ಗ್ರಿಲ್ ಅಳವಡಿಸಿ ಬೀಗ ಹಾಕಿರೋದು ಗೊತ್ತಾಗಿದೆ.
ಸಮಾಧಿಯನ್ನು ಮೂಲತಃ ಸುಮಾರು 2 ವರ್ಷಗಳ ಹಿಂದೆ ಸಂಬಂಧಿಸಿದ ಸಮಿತಿಯಿಂದ ಅನುಮತಿ ಪಡೆಯದೆ ನಿರ್ಮಿಸಲಾಗಿದೆ. ಸಮಾಧಿಯನ್ನ ಸ್ಮಶಾನದ ಪ್ರವೇಶದ್ವಾರದ ಮುಂಭಾಗದಲ್ಲಿ ಮತ್ತು ಸ್ಮಶಾನದ ಹಾದಿಯಲ್ಲಿ ನಿರ್ಮಿಸಲಾಗಿದೆ. ದಾರಿಹೋಕರು ಸಮಾಧಿಯ ಮೇಲೆ ನಡೆದು ಹೋಗುವುದನ್ನ ತಪ್ಪಿಸಲು ಸಮಾಧಿಯ ಮೇಲಿನ ಗ್ರಿಲ್ ಅನ್ನು ಅಳವಡಿಸಲಾಗಿದೆ. ಹಳೆಯ ಸಮಾಧಿ ಮೇಲೆ ಇತರ ಶವಗಳನ್ನು ಹೂಳುವುದನ್ನ ತಡೆಯಲು ಸಹ ಈ ರೀತಿ ಮಾಡಲಾಗಿದೆ ಎಂದು ಮಸೀದಿಯ ಮುವಾಝಿನ್ ಮುಖ್ತಾರ್ ಸಾಹಬ್ ಹೇಳಿದರು.