ಗೃಹ ಬಳಕೆಯ ಎಲ್ ಪಿ ಜಿ ಭದ್ರತಾ ಠೇವಣಿಯನ್ನು ಹೆಚ್ಚಳ ಮಾಡಿದ ಬೆನ್ನಲ್ಲೇ, ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ ಪಿ ಜಿ ಭದ್ರತಾ ಠೇವಣಿ ದರಗಳನ್ನೂ ಹೆಚ್ಚಳ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿವೆ. ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.
ಹೊಸ ದರ ಪಟ್ಟಿ ಪ್ರಕಾರ, 19 ಕೆಜಿಯ ವಾಣಿಜ್ಯ ಸಿಲಿಂಡರ್ ಭದ್ರತಾ ಠೇವಣಿ ದರ 1050 ರೂಪಾಯಿ ಹೆಚ್ಚಳವಾಗಿದೆ. ಅಂದರೆ, ಇದುವರೆಗೆ 2550 ರೂಪಾಯಿ ಇತ್ತು. ಇನ್ನು ಮುಂದೆ ಪ್ರತಿ ಸಿಲಿಂಡರ್ ಗೆ 3600 ರೂಪಾಯಿ ಆಗಲಿದೆ.
ಗ್ರಾಹಕರು ಇನ್ನು ಮುಂದೆ 47.5 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ಭದ್ರತಾ ಠೇವಣಿಯನ್ನು 900 ರೂಪಾಯಿ ಹೆಚ್ಚುವರಿ ಅಂದರೆ, 7350 ರೂಪಾಯಿಗಳನ್ನು ತೆರಬೇಕು. ಇದುವರೆಗೆ ಭದ್ರತಾ ಠೇವಣಿ 6450 ರೂಪಾಯಿಗಳಿತ್ತು.
ಇದಕ್ಕೂ ಮುನ್ನ ತೈಲ ಕಂಪನಿಗಳು ಗೃಹ ಬಳಕೆಯ ಎಲ್ ಪಿ ಜಿ ಸಂಪರ್ಕಗಳ ಒಂದು ಬಾರಿಯ ಭದ್ರತಾ ಠೇವಣಿಯನ್ನು 750 ರೂಪಾಯಿ ಹೆಚ್ಚಳ ಮಾಡಿದ್ದವು. ಜೂನ್ 16 ರಂದು ಪರಿಷ್ಕರಣೆ ಮಾಡಲಾಗಿದ್ದು, 1450 ರೂಪಾಯಿಗಳಿಗೆ ಬದಲಾಗಿ 2,200 ರೂಪಾಯಿಗೆ ಹೆಚ್ಚಿಸಲಾಗಿದೆ.
ಈ ಭದ್ರತಾ ಠೇವಣಿ ಹೊಸ ಎರಡು ಸಿಲಿಂಡರ್ ಸಂಪರ್ಕಕ್ಕೆ 4,400 ರೂಪಾಯಿಯಾಗಿದೆ. 5 ಕೆಜಿ ಸಿಲಿಂಡರ್ ಮೇಲಿನ ಭದ್ರತಾ ಠೇವಣಿಯನ್ನು 800 ರಿಂದ 1150 ರೂಪಾಯಿಗೆ ಹೆಚ್ಚಿಸಲಾಗಿದೆ.