ನ್ಯೂಯಾರ್ಕ್: ಭೂಮಿಗೆ ಅಪ್ಪಳಿಸಿ, ಜಗತ್ತಿನೆಲ್ಲೆಡೆ ಖಗೋಳ ಶಾಸ್ತ್ರಜ್ಞರು ಹಾಗೂ ಸಾಮಾನ್ಯ ಜನರ ಕುತೂಹಲ ಕೆರಳಿಸಿದ್ದ ವಸ್ತುವಿನ ಮೂಲ ಪತ್ತೆಯಾಗಿದೆ.
ಭೂಮಿಗೆ ಬಡಿದ ಊಮುವಾಮುವಾ ಎಂಬ ವಸ್ತು ಸೌರಮಂಡಲಕ್ಕಿಂತ ಆಚೆಯಿಂದ ಬಂದಿದೆ ಎಂಬ ಸಂಗತಿ 2017ರಲ್ಲಿ ಭಾರೀ ಸದ್ದು ಮಾಡಿತ್ತು. ಅದು ಭೂಮಿಯ ಅತಿ ಸಮೀಪದಲ್ಲಿ ಸಂಚರಿಸಿದ ತಾರಾ ಮಂಡಲವೆಂದು ಸದ್ಯಕ್ಕೆ ತಿಳಿದುಬಂದಿದೆ.
ಅಮೆರಿಕದ ಸ್ಪೇಸ್ ಕಮಾಂಡ್ ಬಿಡುಗಡೆ ಮಾಡಿರುವ ರಹಸ್ಯ ವರದಿಯಲ್ಲಿ, ಈ ಘಟನೆಗೆ ಮೂರು ವರ್ಷಗಳಿಗೂ ಮೊದಲು 2014ರಲ್ಲಿ ಮತ್ತೊಂದು ತಾರಾ ಮಂಡಲವು ಭೂಮಿಯ ಸನಿಹಕ್ಕೆ ಬಂದಿತ್ತು.
ಅದರಿಂದ ಚಿಮ್ಮಿರುವ ಬೆಂಕಿ ಚೆಂಡೊಂದು ಪಪುವಾ ನ್ಯೂಗಿನಿ ಮೇಲೆ ಉರಿದು, ಅನ್ಯತಾರೆಯ ಅವಶೇಷಗಳು ದಕ್ಷಿಣ ಪೆಸಿಫಿಕ್ ಮಹಾಸಾಗರಕ್ಕೆ ಬಿದ್ದಿದ್ದವು ಎಂದು ಹೇಳುವ ಮೂಲಕ, ಹಾರ್ವರ್ಡ್ ವಿಶ್ವವಿದ್ಯಾಲಯದ ಇಬ್ಬರು ಸಂಶೋಧಕರ ವಾದವನ್ನು ಅಮೆರಿಕ ಸ್ಪೇಸ್ ಕಮಾಂಡ್‌ನ ರಹಸ್ಯ ವರದಿ ಖಚಿತಪಡಿಸಿದೆ.
ಸಂಶೋಧಕರ ಪ್ರಕಾರ, ಆ ವಸ್ತುವು ಕೆಲವೇ ಅಡಿಗಳಷ್ಟಿದ್ದರೂ ತನ್ನ ಅವಶೇಷಗಳನ್ನು ಪೆಸಿಫಿಕ್ ಮಹಾಸಾಗರಕ್ಕೆ ಬೀಳಿಸುವಷ್ಟು ದೊಡ್ಡದಾಗಿತ್ತು. ಈ ಸಂಶೋಧನೆಯ ಕೀರ್ತಿಯನ್ನು ಹಾರ್ವರ್ಡ್ ವಿವಿಯ ಖಗೋಳ ಭೌತಶಾಸ್ತ್ರ ವಿದ್ಯಾರ್ಥಿ ಅಮೀರ್ ಸಿರಾಜ್ ಹಾಗೂ ವಿಜ್ಞಾನದ ಕಿರಿಯ ಪ್ರಾಧ್ಯಾಪಕ ಅಬ್ರಹಾಂ ಲೋಯೆಬ್ ಅವರಿಗೆ ನೀಡಲಾಗಿದೆ.