ಚೆನ್ನೈ: ತಮಿಳುನಾಡಿನ ಪುದುಚೇರಿಯಲ್ಲಿ ಯುವ ಜೋಡಿ ಉಳಿದುಕೊಂಡಿದ್ದ ಲಾಡ್ಜ್ ರೂಮ್ ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ನಟಿಯ ಮಾಲೀಕತ್ವದ ರೆಸಾರ್ಟ್ ಒಂದರ ಸ್ನಾನ ಗೃಹದಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿ ರಾದ್ದಾಂತ ಸೃಷ್ಟಿಯಾಗಿತ್ತು. ಈಗ ಪುದುಚೇರಿಯಲ್ಲಿ ಅಂತಹುದೇ ಘಟನೆ ಬೆಳಕಿಗೆ ಬಂದಿದೆ.
ಪುದುಚೇರಿಗೆ ಬಂದಿದ್ದ ಯುವ ಜೋಡಿ ಜೆಜೆ ರೆಸಿಡೆನ್ಸಿಯಲ್ಲಿ ರೂಮ್ ಬುಕ್ ಮಾಡಿದ್ದು, ಪ್ರವಾಸಿ ತಾಣಗಳನ್ನು ನೋಡಿಕೊಂಡು ವಿಶ್ರಾಂತಿ ಪಡೆಯಲು ರೂಂಗೆ ಆಗಮಿಸಿದ ಜೋಡಿಗೆ ಶಾಕ್ ಕಾದಿತ್ತು. ರೂಮ್ ಬೆಡ್ ಮೇಲಿನ ಪ್ಲಗ್ ಪಾಯಿಂಟ್ ನಲ್ಲಿ ಫ್ಲಾಶ್ ಲೈಟ್ ಇರುವುದನ್ನು ಗಮನಿಸಿದ ಯುವ ಜೋಡಿ ಪರಿಶೀಲಿಸಿದಾಗ ರಹಸ್ಯ ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ.
ರೂಮ್ ನಲ್ಲಿ ಜೋಡಿಯ ಚಟುವಟಿಕೆಗಳೆಲ್ಲ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿವೆ. ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.