ನವದೆಹಲಿ: ಕೋವಿಡ್ ಎರಡನೇ ಅಲೆಯಲ್ಲಿ 594 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಾಹಿತಿ ನೀಡಿದೆ.
ದೆಹಲಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ವೈದ್ಯರು ಎರಡನೇ ಅಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ. ದೆಹಲಿಯಲ್ಲಿ 106 ವೈದ್ಯರು ಮೃತಪಟ್ಟಿದ್ದು, ಬಿಹಾರದಲ್ಲಿ 96 ಮಂದಿ, ಒಡಿಶಾ 22, ತಮಿಳುನಾಡು 21, ಮಹಾರಾಷ್ಟ್ರ 17, ಮಧ್ಯಪ್ರದೇಶದಲ್ಲಿ 16 ವೈದ್ಯರು ಮೃತಪಟ್ಟಿದ್ದಾರೆ.
ವೈದ್ಯರ ಮೇಲೆ ಹಲ್ಲೆಯಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತರ ಮೇಲಿನ ಹಿಂಸಾಚಾರದ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಬಲವಾದ ಕಾನೂನು ರೂಪಿಸಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಭಾರತೀಯ ವೈದ್ಯಕೀಯ ಸಂಘ ಪತ್ರ ಬರೆದಿದೆ.
ಅಸ್ಸಾಂನಲ್ಲಿ ಹೊಜಾಲ್ ಜಿಲ್ಲೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯನ ಮೇಲೆ ಜನಸಮೂಹ ಹಲ್ಲೆ ನಡೆಸಿದೆ. ಕೋವಿಡ್ ರೋಗಿ ಮೃತಪಟ್ಟ ನಂತರ ಆಕ್ರೋಶಗೊಂಡ ಜನ ಸಮೂಹ ವೈದ್ಯ ಸೆಯುಜ್ ಕುಮಾರ್ ಮೇಲೆ ಅಮಾನವೀಯವಾಗಿ ದಾಳಿ ನಡೆಸಿದೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ವೈದ್ಯರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಐಎಂಎ ಒತ್ತಾಯಿಸಿದೆ.