
ಎರಡು ವರ್ಷಗಳ ಹಿಂದೆ, ಕೊರೋನಾ ಮನುಷ್ಯರಿಂದ ಮನುಷ್ಯರಿಗೆ ಹರಡುವುದರ ಬಗ್ಗೆ ಸ್ಪಷ್ಟ ಪುರಾವೆಯಿಲ್ಲ ಎಂದು WHO ಟ್ವೀಟ್ ಮಾಡಿತ್ತು. ಆ ಟ್ವೀಟ್ ನ ವಾರ್ಷಿಕೋತ್ಸವವನ್ನ ವಿಶ್ವದೆಲ್ಲೆಡೆಯ ನೆಟಿಜ಼ೆನ್ ಗಳು ಜನವರಿ 14 ಮತ್ತು 15ರಂದು ಆಚರಿಸಿದ್ದಾರೆ. ಚೀನಾ ಸರ್ಕಾರದ ಹೇಳಿಕೆಯನ್ನ ಬೆಂಬಲಿಸಿ ಕೊರೋನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸ್ಪಷ್ಟ ಪುರಾವೆಗಳಿಲ್ಲ ಎಂದು ಜನವರಿ 14, 2020 ರಂದು, WHO ಟ್ವೀಟ್ ಮಾಡಿತ್ತು. ಇದಕ್ಕೆ ಚೀನಾದ ವೈದ್ಯಾಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆ, ವುಹಾನ್, ನೋವೆಲ್ ಕೊರೋನಾ ವೈರಸ್, ಎಂಬ ಶೀರ್ಷಿಕೆ ನೀಡಿತ್ತು ವಿಶ್ವ ಆರೋಗ್ಯ ಸಂಸ್ಥೆ.
ವಿಪರ್ಯಾಸವೆಂದರೆ ಈ ಟ್ವೀಟ್ ಮಾಡಿದ ಎರಡೇ ತಿಂಗಳ ನಂತರ, WHO ಕೋವಿಡ್ -19 ಅನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿತು. ಇದನ್ನ ಗಮನಿಸಿದ ಆರೋಗ್ಯ ತಜ್ಞರು, ವಿಶ್ವನಾಯಕರು ಕಡೆಗೆ ಸಾಮಾನ್ಯ ಜನರು ಕೂಡ ವಿಶ್ವ ಆರೋಗ್ಯ ಸಂಸ್ಥೆಯನ್ನ ಇಷ್ಟು ದೊಡ್ಡ ಸತ್ಯ ಮುಚ್ಚಿಡಲು ಚೀನಾಗೆ ಸಹಾಯ ಮಾಡಿದೆ ಎಂದು ತೀವ್ರವಾಗಿ ಟೀಕಿಸಿದ್ದರು.
ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯದ ಹಕ್ಕನ್ನು ಭದ್ರಪಡಿಸುವ ಜಾಗತಿಕ ರಕ್ಷಕನಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಯು ಈ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿರೋ ಚೀನಾವನ್ನು, ಹೊಣೆಗಾರರನ್ನಾಗಿ ಮಾಡಲು ವಿಫಲವಾಗಿದೆ ಎಂದು ಹಲವರು WHO ವಿರುದ್ಧ ವಾಗ್ದಾಳಿ ನಡೆಸಿದರು.
ಈ ವಿಷಯವಾಗಿ ಎಲ್ಲಕ್ಕಿಂತ ಹೆಚ್ಚಾಗಿ, WHO ಡೈರೆಕ್ಟರ್-ಜನರಲ್ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರನ್ನ ಹೆಚ್ಚು ಪ್ರಶ್ನಿಸಲಾಗಿದೆ. ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸಲು ವಿಫಲರಾಗಿದ್ದಕ್ಕಾಗಿ ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಟೆಡ್ರೋಸ್ ಅವರನ್ನ ಪ್ರಶ್ನಿಸಿದ್ದಾರೆ, ಆದರೆ ಟೆಡ್ರೊಸ್ ಎಂದಿಗೂ ಸ್ಪಷ್ಟ ಉತ್ತರವನ್ನು ನೀಡಲಿಲ್ಲ. ಬದಲಿಗೆ ತೈವಾನ್ ನ ಟ್ರೋಲ್ ಗಳು ತನ್ನ ಮೇಲೆ ದಾಳಿ ಮಾಡುತ್ತಿವೆ ಎಂದು ಆರೋಪಿಸಿದರು. ನನ್ನ ಜನಾಂಗೀಯತೆಯ ಕಾರಣದಿಂದಾಗಿ ನನ್ನನ್ನು ತುಳಿಯಲಾಗುತ್ತಿದೆ ಎಂದು ಸಹಾನುಭೂತಿ ಗಳಿಸಲು ಪ್ರಯತ್ನಿಸಿದ್ದರು.