ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದಿರುತ್ತದೆ. ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ನ್ಯೂಸ್ 18 ಜೊತೆ ನಡೆದ ಸಂದರ್ಶನದ ವೇಳೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ‘ಏರ್ ಡೆಕ್ಕನ್’ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಖಂಡಿತವಾಗಿಯೂ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಬೆಂಗಳೂರು ಈಗ ಎಲ್ಲ ದಿಕ್ಕಿನಲ್ಲೂ ಬೆಳೆಯುತ್ತಿದೆ. ಅಲ್ಲದೆ ಬೆಂಗಳೂರಿಗೆ ಪ್ರತಿನಿತ್ಯ ರಾಷ್ಟ್ರೀಯ, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಕರು ಬರುತ್ತಾರೆ. ಹೀಗೆ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವ ಆಲೋಚನೆ ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಉದಾಹರಣೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವ್ಯಕ್ತಿ ಬೆಂಗಳೂರು ನಾರ್ತ್ ನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ 3 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣವಾದರೆ ಈ ಅವಧಿ ಇಳಿಕೆಯಾಗಬಹುದು ಎಂದು ಹೇಳಿದ ಅವರು, ವಿಮಾನ ಯಾನ ಕಂಪನಿಗಳು ನಡೆಸುವ ಪೈಪೋಟಿಯಂತೆ ವಿಮಾನ ನಿಲ್ದಾಣಗಳು ಸಹ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೌಲಭ್ಯ ನೀಡುವಂತಾಗಬೇಕು ಎಂದು ತಿಳಿಸಿದ್ದಾರೆ.