ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಆಗಸ್ಟ್ 21ರಂದು ಪ್ರಕಟವಾಗಲಿದೆ.
ನೀಟ್ ಮತ್ತು ಸಿಇಟಿ ಅಭ್ಯರ್ಥಿಗಳಿಗೆ ಜೊತೆಯಾಗಿ ಸೀಟು ಹಂಚಿಕೆ ಮಾಡಲಾಗುವುದು. ಈ ಕಾರಣದಿಂದ ಎರಡು ಬಾರಿ ಅಣಕು ಸೀಟು ಹಂಚಿಕೆ ನಡೆಸಲಾಗುವುದು. ಇಂಜಿನಿಯರಿಂಗ್ ಮತ್ತು ವೈದ್ಯ ಕೋರ್ಸ್ ಗಳಿಗೆ ಪ್ರತ್ಯೇಕ ಅಣಕು ಫಲಿತಾಂಶ ಪ್ರಕಟವಾಗಲಿದೆ. ನಂತರ ವಿದ್ಯಾರ್ಥಿಗಳು ತಮ್ಮ ಆಯ್ಕೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗದೆ ತಮ್ಮ ಆಯ್ಕೆ ದಾಖಲಿಸುವ ವೇಳೆ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳಿಗೆ ನೋಂದಣಿ ಮಾಡದಿರುವ ಅಭ್ಯರ್ಥಿಗಳಿಗೆ ನೋಂದಣಿ ಮಾಡಲು ಸಧ್ಯದಲ್ಲಿಯೇ ಪ್ರಾಧಿಕಾರದ ಜಾಲತಾಣದಲ್ಲಿ ಪೋರ್ಟಲ್ ತೆರೆಯಲಾಗುತ್ತದೆ. ಈಗಾಗಲೇ ಯುಜಿ ಸಿಇಟಿಗೆ ನೋಂದಣಿಯಾಗಿರುವ ಅಭ್ಯರ್ಥಿಗಳು ರೋಲ್ ನಂಬರ್ ಹಾಕಿ ಆನ್ಲೈನ್ ಅರ್ಜಿಯಲ್ಲಿ ದಾಖಲಿಸಬೇಕಿದೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ದೊರೆತ ನಂತರ ಇಂಜಿನಿಯರಿಂಗ್ ಸೇರಿದಂತೆ ಇತರೆ ಕೋರ್ಸ್ ಗಳ ಜೊತೆಯಲ್ಲಿ ಆಪ್ಷನ್ ಎಂಟ್ರಿ ದಾಖಲಿಸಲು ಅವಕಾಶ ನೀಡಲಾಗುವುದು.
ಆಗಸ್ಟ್ 7ರಂದು ಮೊದಲನೆಯ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ.
ಆಗಸ್ಟ್ 9 ರಿಂದ 11ರವರೆಗೆ ಸಿಇಟಿ ಅಭ್ಯರ್ಥಿಗಳು ಆಯ್ಕೆಗಳ ಸೇರ್ಪಡೆ, ಬದಲಾವಣೆ, ಡಿಲಿಟ್ ಹೀಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 14ರಂದು ಎರಡನೇ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ.
ಆಗಸ್ಟ್ 14 ರಿಂದ 18ರವರೆಗೆ ನೀಟ್ ಮತ್ತು ಸಿಇಟಿ ಸೇರಿ ಎಲ್ಲಾ ಕೋರ್ಸುಗಳ ಅಭ್ಯರ್ಥಿಗಳು ಆಯ್ಕೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇರುತ್ತದೆ.
ಆಗಸ್ಟ್ 21ರಂದು ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ.