ಬೆಂಗಳೂರು: ಅತಿವೇಗವಾಗಿ ಹರಡುವ ರೂಪಾಂತರ ಕೊರೋನಾ ವೈರಸ್ ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ, ಆತಂಕ ಬೇಡ, ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮತ್ತು ಸೀಲ್ ಡೌನ್ ಅವಶ್ಯಕತೆ ಇಲ್ಲ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು ಎಂದು ಸಚಿವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್ ನಿಂದ ಬಂದವರನ್ನು ಪತ್ತೆ ಮಾಡಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. 1600 ಕ್ಕೂ ಹೆಚ್ಚು ಜನರ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆ ಮಾಡಿದವರಲ್ಲಿ 26 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಮೂವರಲ್ಲಿ ರೂಪಾಂತರ ವೈರಸ್ ಪತ್ತೆಯಾಗಿರುವುದನ್ನು ಐಸಿಎಂಆರ್ ದೃಢಪಡಿಸಿದೆ ಎಂದು ಹೇಳಿದ್ದಾರೆ.
ಸೋಂಕು ತಗುಲಿದವರೆಲ್ಲರೂ ಐಸೋಲೇಷನ್ ನಲ್ಲಿದ್ದಾರೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಐಸೋಲೇಷನ್ ನಲ್ಲಿ ಇಡಲಾಗಿದೆ. ಮಾರ್ಗಸೂಚಿಯನ್ನು ಅನುಸರಿಸಲಾಗುತ್ತಿದೆ. ಲಾಕ್ಡೌನ್, ಸೀಲ್ ಡೌನ್ ಅವಶ್ಯಕತೆ ಇರುವುದಿಲ್ಲ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದೇ ಮುಖ್ಯವೆಂದು ಸಚಿವರು ತಿಳಿಸಿದ್ದಾರೆ.