
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿ ಸಿಕ್ಕಿಬಿದ್ದಿದ್ದಾರೆ.
ಕಂದಾಯ ಇಲಾಖೆ ನಿರೀಕ್ಷಕರಾಗಿ ಬರುವ ಮೊದಲು ಮುಜರಾಯಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಕುಮಾರ್ 2023 ರಿಂದ ಇಬ್ಬರು ತಹಶೀಲ್ದಾರ್, ಒಬ್ಬ ಕೇಸ್ ವರ್ಕರ್ ಸಹಿ ಮತ್ತು ಸೀಲ್ ಬಳಸಿ ಮುಜರಾಯಿ ಇಲಾಖೆಯ 63 ಲಕ್ಷ ರೂ. ಲಪಟಾಯಿಸಿದ್ದಾರೆ.
ಮುಜರಾಯಿ ಇಲಾಖೆಯ ದೇವಾಲಯದಿಂದ ಸರ್ಕಾರಕ್ಕೆ ಹಣ ಸಂದಾಯವಾಗದ ಬಗ್ಗೆ ದೊಡ್ಡಬಳ್ಳಾಪುರ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಗೆ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಹಣ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಖಾತೆಯಲ್ಲಿದ್ದ ಹಣ ಮಾಯವಾದ ಬಗ್ಗೆ ದೊಡ್ಡಬಳ್ಳಾಪುರ ತಹಶೀಲ್ದಾರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಹೇಮಂತ್ ಕುಮಾರ್ ಕೃತ್ಯವೆಸಗಿರುವುದು ಬಯಲಾಗಿದೆ. ಆತನನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಹಣ ದುರ್ಬಳಕೆ ಮಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿ ನಿವೇಶನ ಖರೀದಿಸಿ, ಮನೆ ನಿರ್ಮಿಸಲು ಮುಂದಾಗಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.