ತಿರುವನಂತಪುರಂ: ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಉಗ್ರಗಾಮಿ ಸಂಘಟನೆಗಳು ಎಂದು ಕೇರಳ ಹೈಕೋರ್ಟ್ ಹೇಳಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ.) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ.) ಉಗ್ರಗಾಮಿ ಸಂಘಟನೆಗಳಾಗಿವೆ. ಆದರೆ ನಿಷೇಧಿಸಲಾಗಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ನವೆಂಬರ್ 2021 ರಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಸಂಜಿತ್ ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಗಂಭೀರ ಹಿಂಸಾಚಾರದಲ್ಲಿ ತೊಡಗಿರುವ ಉಗ್ರಗಾಮಿ ಸಂಘಟನೆಗಳು ಎಂಬುದರಲ್ಲಿ ಸಂದೇಹವಿಲ್ಲ, ಆದರೆ, ಅವು ನಿಷೇಧಿತ ಸಂಘಟನೆಗಳಲ್ಲ ಎಂದು ಹೈಕೋರ್ಟ್ ಹೇಳಿದೆ.
ಮೇ 5 ರಂದು ತೀರ್ಪು ಪ್ರಕಟವಾಗಿತ್ತು, ಆದರೆ ವಿವರವಾದ ಆದೇಶದ ಪ್ರತಿ ನಿನ್ನೆ ಹೊರಬಂದಿದೆ. ಸಂಜಿತ್ ಅವರ ಪತ್ನಿ ಎಸ್. ಅರ್ಷಿಕಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಕೆ. ಹರಿಪಾಲ್, 90 ದಿನಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಲು ಪೊಲೀಸರು ಕಾಳಜಿ ವಹಿಸಿದ್ದಾರೆ ಎಂಬ ಅಂಶವು ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರಾಮಾಣಿಕತೆಯನ್ನು ಸಾಬೀತುಪಡಿಸುತ್ತದೆ. ಕೆಲವು ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಸಿಬಿಐ ತನಿಖೆ ನಡೆಸುವಂತೆ ಹೇಳಲು ಸಾಧ್ಯವಿಲ್ಲ ಎಂದರು.
ನವೆಂಬರ್ 15 ರಂದು 27 ವರ್ಷದ ಸಂಜಿತ್ ತನ್ನ ಪತ್ನಿ ಅರ್ಷಿಕಾಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ. ದುಷ್ಕರ್ಮಿಗಳು ಬೈಕ್ ಗೆ ಡಿಕ್ಕಿ ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ.
ಕೊಲೆಯಾದ ಸಂದರ್ಭದಲ್ಲಿ ಸಂಜಿತ್ ತೇನಾರಿ ಪ್ರದೇಶದ ಬೌತಿಕ್ ಶಿಕ್ಷಣ ಪ್ರಮುಖನಾಗಿದ್ದ. ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್), ಎಲಪುಲ್ಲಿ ಪಂಚಾಯತ್‌ನ ತೇನಾರಿ ಮಂಡಲಂನ ಕಾರ್ಯದರ್ಶಿಯಾಗಿದ್ದರು ಎಂದು ಸಂಜಿತ್ ಪತ್ನಿ ತಿಳಿಸಿದ್ದಾರೆ.