
ಗದಗ: ಸರ್ಕಾರಕ್ಕೆ ಸಲ್ಲಿಸಬೇಕಿದ 16 ಲಕ್ಷ ರೂಪಾಯಿ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಗದಗ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಅಮಾನತು ಮಾಡಲಾಗಿದೆ.
ರೂಪಾ ದಲಬಂಜನ ಅವರು ಹಣ ದುರುಪಯೋಗ ಮಾಡಿಕೊಂಡ ಆರೋಪ ಕೇಳಿ ಬಂದಿದ್ದು, ವಿಚಾರಣೆ ಕಾಯ್ದಿರಿಸಿ ಮಾರ್ಚ್ 5ರಂದು ಅವರನ್ನು ಅಮಾನತು ಮಾಡಲಾಗಿದೆ. ಭೂಮಿ ಕೇಂದ್ರದಲ್ಲಿ ಪಹಣಿ ಪಡೆಯಲು ಸಾರ್ವಜನಿಕರು ಸರ್ಕಾರಕ್ಕೆ ಹಣ ಪಾವತಿಸುತ್ತಾರೆ. ಆ ಹಣವನ್ನು ಎಸ್.ಡಿ.ಎ. ರೂಪಾ ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ಎರಡು ಬಾರಿ ನೋಟಿಸ್ ನೀಡಿದರೂ ಉತ್ತರ ಬಂದಿರಲಿಲ್ಲ. ಹೀಗಾಗಿ ಅವರನ್ನು ಅಮಾನತುಪಡಿಸಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ ಮಾಹಿತಿ ನೀಡಿದ್ದಾರೆ.