ಇಡೀ ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ನಡೆಯುತ್ತಿದೆ. ಜನರು ಕಳೆದ ಕೆಲವು ದಿನಗಳಿಂದ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರೆ, ಇನ್ನು ಕೆಲವರು ʼಆಜಾದಿ ಕಾ ಅಮೃತ್ ಮಹೋತ್ಸವʼದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ʼಹರ್ ಘರ್ ತಿರಂಗಾʼ ಅಭಿಯಾನವನ್ನು ಗೌರವಿಸಲು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಿದ್ದಾರೆ.
ಸ್ಕೂಬಾ ಮಾರ್ಗದರ್ಶಕ ನೀರಿನ ಅಡಿಯಲ್ಲಿ (75 ಅಡಿ ಆಳದಲ್ಲಿ) ರಾಷ್ಟ್ರಧ್ವಜವನ್ನು ಹಾರಿಸಿ ತಮ್ಮ ದೇಶಾಭಿಮಾನ ಮೆರೆದಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಅರವಿಂದ್ ಎಂಬ ಸ್ಕೂಬಾ ಇನ್ ಸ್ಟ್ರಕ್ಟರ್ ಈ ಪ್ರಯತ್ನ ಮಾಡಿ ಸಫಲರಾದರು. ಸಾಂಪ್ರದಾಯಿಕ ರೇಷ್ಮೆ ಪಂಚೆ ಉಟ್ಟು, ಆಕ್ಸಿಜನ್ ಸಪೋರ್ಟ್ನಲ್ಲಿ ಸಮುದ್ರದಡಿ ಸಾಗಿ ಧ್ವಜ ಹಾರಿಸುವ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷವೆಂದರೆ ಚೆನ್ನೈ ನೀಲಂಕರೈ ಬೀಚ್ ಮತ್ತು ಪುದುಚೇರಿ ಬೀಚ್ ಎರಡರಲ್ಲೂ ಅವರು ನೀರಿನ ಕೆಳಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ಹಿಂದೆ ವಿಶ್ವ ಯೋಗ ದಿನ, ಪ್ರೇಮಿಗಳ ದಿನ, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಮತ್ತು ಸಾಗರ ಸ್ವಚ್ಛತೆಗಾಗಿ ನೀರಿನ ಅಡಿಯಲ್ಲಿ ಹಲವಾರು ಜಾಗೃತಿ ಅಭಿಯಾನಗಳನ್ನು ಆಯೋಜಿಸಿದ್ದಾರೆ.