ಭುವನೇಶ್ವರ್: ಕೇರಳದಲ್ಲಿ ನಿಫಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ನಿಫಾ ವೈರಸ್ ಭೀತಿ ಮಧ್ಯೆಯೇ ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ರೋಗ ಉಲ್ಬಣಗೊಂಡಿದ್ದು, ಈ ಕಾಯಿಲೆಗೆ ಐವರು ಸಾವನ್ನಪ್ಪಿದ್ದಾರೆ.
ಒಡಿಶಾದ ಬರ್ಗಢ್, ಸುಂದರ್ ಗಢ್ ಜಿಲ್ಲೆಗಳಲ್ಲಿ ಸ್ಕ್ರಬ್ ಟೈಫಸ್ ಸೋಂಕು ಹರಡುತ್ತಿದ್ದು, ಐವರು ಬಲಿಯಾಗಿದ್ದಾರೆ. ಸ್ಕ್ರಬ್ ಟೈಫಸ್ ಸಾಂಕ್ರಾಮಿಕ ರೋಗವಾಗಿದ್ದು, ಒಡಿಶಾ ಸರ್ಕಾರ ರೋಗ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಸ್ಕ್ರಬ್ ಟೈಫಸ್ ಗೆ ಮೃತಪಟ್ಟವರಲ್ಲಿ ಇಬ್ಬರು ಸೊಹೆಲಾ ತಾಲೂಕಿನವರು. ಬರ್ಗಢ್ ಜಿಲ್ಲೆಯ ಅಟ್ಟಬಿರಾ, ಭೇದೆನ್ ಹಾಗೂ ಬರ್ಪಾಲಿ ತಾಲೂಕುಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಒಡಿಶಾದ ಹಲವೆಡೆಗಳಲ್ಲಿ ಸ್ಕ್ರಬ್ ಟೈಫಸ್ ಹಾಗೂ ಲೆಪ್ಟೊಸ್ಪೈರೋಸಿಸ್ ಪ್ರಕರಣಗಳು ವರದಿಯಾಗುತ್ತಿವೆ. ಸ್ಕ್ರಬ್ ಟೈಫಸ್ ನ್ನು ಬುಷ್ ಟೈಫಸ್ ಎಂದೂ ಕರೆಯುತ್ತಾರೆ. ಇದು ಓರಿಯೆಂಟಿಯಾ ಸುಟ್ಸುಗಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಸ್ಕ್ರಬ್ ಟೈಫಸ್ ಸೋಂಕಿತ ಚಿಗ್ಗರ್ಸ್ (ಲಾರ್ವಾ ಹುಳಗಳು) ಕಚ್ಚುವುದರಿಂದ ಜನರಿಗೆ ಹರಡುತ್ತದೆ.
ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸಿದೆ.