ಝಿಕಾ ವೈರಸ್ ಆತಂಕದ ನಡುವೆಯೇ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಹನಸ್ಗಂಜ್ ಪ್ರದೇಶದಲ್ಲಿ ಸ್ಕ್ರಬ್ ಟೈಫಸ್ ಪ್ರಕರಣವು ವರದಿಯಾಗಿದೆ.
ಐಡಿಎಸ್ಪಿ ನೋಡಲ್ ಅಧಿಕಾರಿ ಡಾ.ವಿ.ಕೆ. ಗುಪ್ತಾ ಸ್ಕ್ರಬ್ ಟೈಫಸ್ ಸೋಂಕನ್ನು ದೃಢೀಕರಿಸಿದ್ದಾರೆ. ಸ್ಕ್ರಬ್ ಟೈಫಸ್ ಸೋಂಕು ಹೊಂದಿರುವ ರೋಗಿಯು ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ರು.
ಆರೋಗ್ಯ ಇಲಾಖೆ ತಂಡ ರೋಗಿಯು ವಾಸವಿದ್ದ ಪ್ರದೇಶಕ್ಕೆ ಭೇಟಿ ನೀಡಿದ್ದು ಔಷಧಿ ವಿತರಣೆ ಮಾಡಿದೆ ಎಂದು ವಿ.ಕೆ. ಗುಪ್ತಾ ಹೇಳಿದ್ದಾರೆ. ರೋಗಿಯು ಘಜಫರ್ನಗರದ ನಿವಾಸಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಪರೀಕ್ಷೆ ಮಾಡಿಸಿದ ವೇಳೆಯಲ್ಲಿ ಸ್ಕ್ರಬ್ ಟೈಫಸ್ ಇರುವುದು ತಿಳಿದಿದೆ.
ತಲೆನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಕುಟುಂಬಸ್ಥರು ಲಕ್ನೋದ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆಯಲ್ಲಿ ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸಿ ಸ್ಕ್ರಬ್ ಟೈಫಸ್ ಇರುವುದನ್ನು ದೃಢೀಕರಿಸಿದ್ದಾರೆ.
ಸ್ಕ್ರಬ್ ಟೈಫಸ್ ಕೇಂದ್ರ ನರಮಂಡಲ, ಹೃದಯನಾಳದ ಸಮಸ್ಯೆ, ಮೂತ್ರಪಿಂಡ, ಉಸಿರಾಟ ಹಾಗೂ ಜಠರದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅನೇಕ ಸಂದರ್ಭಗಳಲ್ಲಿ ರೋಗಿಯು ಬಹು ಅಂಗಾಂಗ ವೈಫಲ್ಯದಿಂದ ಸಾಯಲೂಬಹುದು ಎಂದು ಗುಪ್ತಾ ಮಾಹಿತಿ ನೀಡಿದ್ದಾರೆ. ಇದು ಓರಿಯಂಟಿಯಾ ಸ್ಕ್ರಬ್ ಟೈಫಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದೆ.
ಸೋಂಕಿತ ಲಾರ್ವಾ ಹುಳುಗಳು ಕಚ್ಚುವುದರಿಂದ ಈ ಕಾಯಿಲೆ ಬರುತ್ತದೆ. ಜ್ವರ, ತಲೆನೋವು, ಮೈ ಕೈ ನೋವು ಇವೆಲ್ಲ ಸ್ಕ್ರಬ್ ಟೈಫಸ್ನ ಲಕ್ಷಣಗಳಾಗಿವೆ.