ಬೆಂಗಳೂರು: 15 ವರ್ಷ ಹಳೆಯ ಸರ್ಕಾರಿ ವಾಹನಗಳ ಗುಜರಿಗೆ ಹಾಕಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರದ 2022ರ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಮೂಲಕ ಸರ್ಕಾರದ ಬಳಿ ಇರುವ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಸಭೆಯ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಬಳಿ 15 ವರ್ಷಕ್ಕಿಂತ ಹಳೆಯ 15,295 ವಾಹನಗಳಿದ್ದು, ಇವುಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಪಡೆಯಬೇಕಿದೆ. ಇದರಿಂದ ಸರ್ಕಾರಕ್ಕೆ 500 ಕೋಟಿ ರೂ. ನಷ್ಟು ವೆಚ್ಚವಾಗುತ್ತದೆ. ಮೊದಲ ಹಂತದಲ್ಲಿ 5000 ವಾಹನಗಳನ್ನು ಗುಜರಿಗೆ ಹಾಕಲಿದ್ದು, ನಂತರ ಹಂತ ಹಂತವಾಗಿ ಉಳಿದ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಕೇಂದ್ರ ಸರ್ಕಾರದಿಂದ 100 ಕೋಟಿ ರೂ.ನಷ್ಟು ಪ್ರೋತ್ಸಾಹ ಧನ ಸಿಗಲಿದೆ ಎಂದು ಹೇಳಿದ್ದಾರೆ.
15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ಈ ನೀತಿಯು ಖಾಸಗಿ ವಾಹನಗಳಿಗೂ ಅನ್ವಯವಾಗಲಿದೆ. ಖಾಸಗಿ ವಾಹನಗಳಿಗೂ ಜಾರಿಗೊಳಿಸಲು ಕೇಂದ್ರ ಸರ್ಕಾರದ ಒತ್ತಡ ಇದೆ. ಸದ್ಯಕ್ಕೆ ಸರ್ಕಾರಿ ವಾಹನಗಳಿಗೆ ಮಾತ್ರ ಇದು ಜಾರಿಯಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.