ಬೆಂಗಳೂರು: ಗುಜರಿಗೆ ಹಾಕಿದ ಬಸ್ ಗಳನ್ನು ಸಂಚಾರಕ್ಕೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.
ಗುಜರಿಗೆ ಸೇರಿದ ಬಸ್ ಗಳನ್ನು ಕೆಎಸ್ಆರ್ಟಿಸಿ ಮತ್ತೆ ಸಂಚಾರಕ್ಕೆ ಬಳಸಬಾರದು. ಸದೃಢತೆ ಪತ್ರ ಇದ್ದರೆ ಮಾತ್ರ ಬಸ್ ಓಡಿಸಬೇಕೆಂದು ತಾಕೀತು ಮಾಡಲಾಗಿದೆ.
ನಿಗದಿತ ಕಿಲೋಮೀಟರ್ ಗಳಷ್ಟು ಸಂಚರಿಸಿದ ನಂತರ ಸಾಮರ್ಥ್ಯ ಕಳೆದುಕೊಂಡ ಕೆಎಸ್ಆರ್ಟಿಸಿ ಬಸ್ ಗಳನ್ನು ಗುಜರಿಗೆ ಹಾಕಬೇಕು. ಗುಜರಿಗೆ ಹಾಕಿದ ಬಸ್ ಗಳನ್ನು ಪುನಃ ನಗರ, ಗ್ರಾಮಾಂತರ ಪ್ರದೇಶ ಅಥವಾ ಬೇರೆ ಯಾವುದೇ ಮಾರ್ಗಗಳಲ್ಲಿ ಸಂಚಾರಕ್ಕೆ ಬಳಸಲು ಅನುಮತಿ ನೀಡಬಾರದು ಎಂದು ಹೈಕೋರ್ಟ್ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಅವಧಿ ಮುಗಿದ ನಂತರ ಗುಜರಿ ಸೇರಬೇಕಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆಗಿಳಿಸಿ ಅಪಘಾತ ಉಂಟು ಮಾಡಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರತಿ ವರ್ಷವೂ ಬಸ್ ಗಳು ಸಂಚಾರಕ್ಕೆ ಅರ್ಹವಾಗಿರುವ ಬಗ್ಗೆ ಆರ್.ಟಿ.ಓ. ಅಧಿಕಾರಿಯಿಂದ ಎಫ್.ಸಿ. ಪಡೆಯಬೇಕು. ಎಫ್.ಸಿ. ಪಡೆಯದ ಬಸ್ ಗಳಿಗೆ ಸಂಚಾರಕ್ಕೆ ಅನುಮತಿ ನೀಡಬಾರದು. ಬಸ್ ಗಳ ಪರಿಶೀಲನೆ ನಡೆಸಿ ಕಾಲಕಾಲಕ್ಕೆ ದುರಸ್ತಿ ಮಾಡಬೇಕು. ದೋಷವಿದ್ದಾಗ ಬಸ್ ಚಾಲನೆ ಮಾಡಬಾರದು ಎಂಬುದು ಸೇರಿದಂತೆ ನ್ಯಾಯಪೀಠ ವಿವಿಧ ನಿರ್ದೇಶನ ನೀಡಿದೆ.