![](https://kannadadunia.com/wp-content/uploads/2023/08/chandrayana-3-1.png)
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಚಂದ್ರಯಾನ-3 ವಿಕ್ರಮ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಲ್ಯಾಂಡಿಂಗ್ ಸಾಧನೆ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.
ಇಂದಿನ ಸಾಧನೆಗಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಮ್ಮ ವೈಜ್ಞಾನಿಕ ಸಮುದಾಯದ ದಶಕಗಳ ಪ್ರಚಂಡ ಚತುರತೆ ಮತ್ತು ಕಠಿಣ ಪರಿಶ್ರಮದ ಫಲವಾಗಿ ಚಂದ್ರಯಾನ 3 ಅಜ್ಞಾತ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಿದೆ. 1962 ರಿಂದ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಹೊಸ ಎತ್ತರಗಳನ್ನು ಅಳೆಯುವುದನ್ನು ಮುಂದುವರೆಸಿದೆ ಮತ್ತು ಯುವ ಕನಸುಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಕೂಡ ಇಸ್ರೋ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು, ಇದೊಂದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ. ವಿಜ್ಞಾನಿಗಳನ್ನು ಅಭಿನಂದಿಸಿ ಈ ಹಿಂದೆ ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ. ಭಾರತದ ಯಶಸ್ವಿ ಚಂದ್ರಯಾನ ಕೇವಲ ಭಾರತ ಮಾತ್ರವಲ್ಲ, ಈ ಯಶಸ್ಸು ಎಲ್ಲ ಮಾನವೀಯತೆಗೂ ಸೇರಿದೆ ಎಂದು ಹೇಳಿದ್ದಾರೆ.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವುದು ನವಭಾರತದ ಉದಯವಾಗಿದೆ. ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26ರಂದು ಭೇಟಿ ನೀಡಲಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ.