ವಿಜ್ಞಾನಿಗಳು ಭೂಮಿಯ ಗಾತ್ರವನ್ನು ಹೋಲುವ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ. ಅದರ ಹೆಸರು ಗ್ಲೀಸ್ 12 ಬಿ. ಈ ಗ್ರಹದ ಮೇಲ್ಮೈ ಉಷ್ಣತೆಯು ಸುಮಾರು 107 ಡಿಗ್ರಿ ಫ್ಯಾರನ್‌ಹೀಟ್ (42 ಡಿಗ್ರಿ ಸೆಲ್ಸಿಯಸ್) ಆಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಅತ್ಯಂತ ವೇಗದ ಬಾಹ್ಯಾಕಾಶ ನೌಕೆಯ ಮೂಲಕ ಗ್ಲೀಸ್ 12 ಬಿ ತಲುಪಲು ಸರಿಸುಮಾರು 2.25 ಲಕ್ಷ ವರ್ಷಗಳು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.
ಇದು ವಾಸಯೋಗ್ಯ ಗ್ರಹ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಈ ಗ್ರಹವು ಭೂಮಿಗಿಂತ ಚಿಕ್ಕದಾಗಿದೆ, ಆದರೆ ಶುಕ್ರಕ್ಕಿಂತ ದೊಡ್ಡದಾಗಿದೆ. ಹೊಸದಾಗಿ ಪತ್ತೆಯಾದ ಈ ಗ್ರಹವು ಸುಮಾರು 40 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಸಣ್ಣ ನಕ್ಷತ್ರವನ್ನು ಸುತ್ತುತ್ತಿದೆ. ಒಂದು ವರದಿಯ ಪ್ರಕಾರ Gliese 12b ಹೆಸರಿನ ಗ್ರಹವು ಎಕ್ಸೋಪ್ಲಾನೆಟ್ ನಕ್ಷತ್ರಪುಂಜದ Piscse ನಲ್ಲಿರುವ ತಂಪಾದ ಕೆಂಪು ಕುಬ್ಜ ನಕ್ಷತ್ರವನ್ನು ಸುತ್ತುತ್ತದೆ. ಈ ಕೆಂಪು ಕುಬ್ಜ ನಕ್ಷತ್ರವು ನಮ್ಮ ಸೂರ್ಯನ ಗಾತ್ರದ ಸುಮಾರು 27 ಪ್ರತಿಶತ ಮತ್ತು ಅದರ ತಾಪಮಾನದ 60 ಪ್ರತಿಶತದಷ್ಟಿದೆ.
ಗ್ಲೀಸ್ 12 ಬಿ ಸೂರ್ಯನಿಗಿಂತ ಚಿಕ್ಕದಾಗಿದೆಯಂತೆ. ಇಲ್ಲಿ ನೀರು ಇರಬಹುದು ಎಂಬುದು ವಿಜ್ಞಾನಿಗಳ ಅಂದಾಜು. ಈ ಗ್ರಹವು ಪ್ರತಿ 12.8 ದಿನಗಳಿಗೊಮ್ಮೆ ತನ್ನ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ಇದು ಭೂಮಿಯ ಗಾತ್ರದ ಹೊಸ ಜಗತ್ತು ಎಂದೇ ಬಣ್ಣಿಸಲಾಗ್ತಿದೆ. ಈ ಹೊಸ ಗ್ರಹವು ನಮಗೆ ಹತ್ತಿರದಲ್ಲಿರುವುದರಿಂದ ಬಹುದೊಡ್ಡ ಆವಿಷ್ಕಾರ ಎನಿಸಿಕೊಂಡಿದೆ. ಆದರೆ ಇಲ್ಲಿಗೆ ತಲುಪುವುದು ಮಾತ್ರ ಅಸಾಧ್ಯ.