ಕಳೆದ ಎರಡು ವರ್ಷಗಳಿಂದ ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕು ಈಗ ತಹಬದಿಗೆ ಬಂದಿದೆಯಾದರೂ ಸಂಪೂರ್ಣವಾಗಿ ತೊಲಗಿಲ್ಲ. ಅಲ್ಲದೆ ಸೋಂಕಿನ ಉಗಮ ಸ್ಥಾನ ಎನ್ನಲಾದ ಚೀನಾದಲ್ಲಿ ಮತ್ತೆ ಉಲ್ಬಣಿಸುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ನಿಯಂತ್ರಣಕ್ಕೆ ಈಗಲೂ ಸಹ ವಿಜ್ಞಾನಿಗಳು ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದು, ಮಂಗಳವಾರದಂದು ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ನಾಸಲ್ ವ್ಯಾಕ್ಸಿನ್ ಭಾರತದಲ್ಲಿ ತುರ್ತು ಬಳಕೆಗೆ ಡಿಜಿಸಿಐ ನಿಂದ ಅನುಮತಿ ಪಡೆದಿತ್ತು.
ಇದರ ಮಧ್ಯೆ ನೆದರ್ಲ್ಯಾಂಡ್ ವಿಜ್ಞಾನಿಗಳು ಮಹತ್ವದ ಸಾಧನೆಯೊಂದನ್ನು ಮಾಡಿದ್ದು, ಇವರು ತಯಾರಿಸಿರುವ ಮೊಬೈಲ್ ಆಪ್ ಮೂಲಕ ವ್ಯಕ್ತಿಗಳಲ್ಲಿನ ಕೊರೊನಾ ಸೋಂಕು ಪತ್ತೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ.
ಕೇವಲ ಧ್ವನಿ ಮೂಲಕವೇ ವ್ಯಕ್ತಿಗಳಲ್ಲಿ ಇರುವ ಕೊರೊನಾ ಸೋಂಕನ್ನು ಕೃತಕ ಬುದ್ಧಿಮತ್ತೆ ಮೂಲಕ ಪತ್ತೆ ಹಚ್ಚುತ್ತದೆ ಎನ್ನಲಾಗಿದ್ದು, ಇದರ ನಿಖರತೆ ಶೇಕಡ 89 ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹಾಲಿ ಚಾಲ್ತಿಯಲ್ಲಿರುವ ಇತರೆ ವಿಧಾನಗಳಲ್ಲಿ ಸೋಂಕು ಪತ್ತೆ ಹಚ್ಚುವ ಪ್ರಮಾಣ ಶೇಕಡ 83 ರಷ್ಟಿದ್ದು, ಆದರೆ ಈ ಆಪ್ ನಿಖರತೆ ಶೇಕಡ 89 ಎಂಬುದು ಮಹತ್ವದ ಸಂಗತಿ.
RT-PCR ಟೆಸ್ಟ್ ದುಬಾರಿಯಾಗಿರುವ ಬಡ ದೇಶಗಳ ಜನತೆಗೆ ಈ ಆಪ್ ಹೆಚ್ಚು ಉಪಯುಕ್ತ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದು, ಇದನ್ನು ಸ್ಪೇನ್ ನ ಬಾರ್ಸಿಲೋನದಲ್ಲಿ ನಡೆದ ಸಮ್ಮೇಳನ ಒಂದರಲ್ಲಿ ಮಂಡಿಸಲಾಗಿದೆ.