ಕೊಲೆ ರಹಸ್ಯಗಳನ್ನು ಭೇದಿಸುವುದು ಸುಲಭವಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನ ಸಾಮೂಹಿಕ ಹತ್ಯಾಕಾಂಡ ರಹಸ್ಯವನ್ನು ಭೇದಿಸಲಾಗಿದೆ ಎಂದರೆ ನಂಬುವುದು ಕಷ್ಟ ಅಲ್ಲವೆ? ಆದರೆ ಜರ್ಮನಿಯ ತಾಲ್ಹೈಮ್‌ನಲ್ಲಿ ಇಂಥದ್ದೊಂದು ಸಂಶೋಧನೆ ನಡೆದಿದ್ದು, ಕೊಲೆ ಕೇಸ್ ಅನ್ನು ಭೇದಿಸಲಾಗಿದೆ.
ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದಾದ ಹತ್ಯಾಕಾಂಡದ ಕುರಿತು ವಿಜ್ಞಾನಿಗಳ ಗುಂಪು ತನಿಖೆ ನಡೆಸಿದ್ದು ಅದನ್ನು ಈಗ ಭೇದಿಸಿದ್ದಾರೆ. ಈ ಪುರಾತನ ಕೊಲೆ ರಹಸ್ಯವನ್ನು ಬಿಚ್ಚಿಡಲು, ಅವರು ಶಿಲಾಯುಗದ ಆಯುಧಗಳನ್ನು ಎತ್ತಿಕೊಂಡು ತಲೆಬುರುಡೆಗಳ ಮೇಲೆ ಪ್ರಯೋಗ ನಡೆಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
34 ಶಿಲಾಯುಗದ ಮಾನವರ ಸಾವಿಗೆ ಕಾರಣವಾದ ಹತ್ಯಾಕಾಂಡದಲ್ಲಿ ಸ್ಪೇನ್ ಮತ್ತು ಲಂಡನ್ ಸಂಶೋಧಕರು ನಡೆದಿರುವ ಘಟನೆಗಳ ಕುರಿತು ತನಿಖೆಯಿಂದ ಈಗ ಬಯಲುಗೊಂಡಿದೆ. ಸಂಶೋಧಕರು ತಲೆಬುರುಡೆಗಳು ಯಾವ ಯುಗಕ್ಕೆ ಸಂಬಂಧಿಸಿದ್ದು ಎನ್ನುವುದು ಮಾತ್ರವಲ್ಲದೇ ಇಷ್ಟೂ ಮಂದಿಯ ಸಾವಿಗೆ ಕಾರಣವಾಗಿರುವ ರಹಸ್ಯವನ್ನೂ ಭೇದಿಸಿದ್ದಾರೆ. ಎರಡು ಗುಂಪುಗಳ ನಡುವೆ ನಡೆದಿರುವ ಹೋರಾಟದಲ್ಲಿ ಒಂದು ಗುಂಪು ಹಿಂಭಾಗದಿಂದ ಬಂದು ಇನ್ನೊಂದು ಗುಂಪಿನ ಜನರನ್ನು ಕೊಲೆ ಮಾಡಿರುವುದಾಗಿ ಕಂಡುಹಿಡಿಯಲಾಗಿದೆ.