ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಪ್ಲಾಸ್ಟಿಕ್ ಸಾಗರ ಸೇರುತ್ತಿದೆ.
ಪ್ಲಾಸ್ಟಿಕ್ ಬ್ಯಾಗೊಂದು ತ್ಯಾಜ್ಯವಾಗಲು ಸರಾಸರಿ 15 ನಿಮಿಷಗಳು ಬೇಕಾದರೆ ಅದು ಪೂರ್ಣವಾಗಿ ಕೊಳೆಯಲು 1000 ವರ್ಷಗಳು ಹಿಡಿಯುತ್ತವೆ.
ಭೂಮಿ ಮೇಲಿನ ಮೂರನೇ ಅತ್ಯಂತ ಆಳವಾದ ಪ್ರದೇಶವಾದ ಫಿಲಿಪ್ಪೀನ್ಸ್ ಟ್ರೆಂಚ್‌ನ ’ದಿ ಎಮ್ಡಿನ್ ಡೀಪ್’ಗೆ ಡೈವ್ ಮಾಡಿದ ಸಾಗರಗಳ ಅಧ್ಯಯನಕಾರ ಡಾ. ಡೆಯೋ ಫ್ಲಾರೆನ್ಸ್ ಒಂಡಾ ಹಾಗೂ ಅವರ ಅಮೆರಿಕನ್ ಸಹವರ್ತಿ ವಿಕ್ಟರ್ ವೆಸ್ಕೋವಾ ಅಲ್ಲಿ 12 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ.
ಈ ವೇಳೆ ಅಲ್ಲಿರುವ ಜೀವಿಗಳ ಅಧ್ಯಯನ ನಡೆಸುತ್ತಿದ್ದ ಇಬ್ಬರಿಗೂ ದೂರದಿಂದ ಜೆಲ್ಲಿಫಿಶ್‌ನಂಥ ದೃಶ್ಯವೊಂದು ಕಂಡಿದೆ. ಹತ್ತಿರ ಹೋಗಿ ನೋಡಿದಾಗ ಅದು ಪ್ಲಾಸ್ಟಿಕ್ ತುಂಡಾಗಿತ್ತೆಂದು ತಿಳಿದು ಬಂದಿದೆ. ಇದಲ್ಲದೇ ಆ ಆಳದಲ್ಲಿ ಪ್ಲಾಸ್ಟಿಕ್, ಪ್ಯಾಂಟ್, ಶರ್ಟ್, ಟೆಡ್ಡಿ ಬೇರ್ ಮತ್ತು ಪ್ಯಾಕೇಜಿಂಗ್ ಐಟಮ್‌ಗಳು ಸೇರಿದಂತೆ ಸಾಕಷ್ಟು ವಸ್ತುಗಳು ಸಿಕ್ಕಿವೆ ಎಂದು ಒಂಡಾ ತಿಳಿಸಿದ್ದಾರೆ.