ಬೀಚಿಂಗ್: ಚೀನಾದ ಜಮೀನಿನಲ್ಲಿ 12 ದಿನಗಳ ಕಾಲ ಕುರಿ ಹಿಂಡೊಂದು ಸುತ್ತುತ್ತಿರುವ ವಿಚಿತ್ರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದನ್ನು ನೀವು ನೋಡಿರುವಿರಾ ? ಬೃಹತ್ ಜಮೀನಿನ ಸುತ್ತಲೂ ಕುರಿಗಳು ಸುತ್ತಾಡುತ್ತೇ ಇದ್ದು, ಬಹಳ ಅಚ್ಚರಿ ಮೂಡಿಸಿದ್ದವು.
ಇದೀಗ ಕುರಿಗಳ ವಿಚಿತ್ರ ವರ್ತನೆಯ ಹಿಂದಿನ ನಿಗೂಢವನ್ನು ಪರಿಹರಿಸಿರುವುದಾಗಿ ವಿಜ್ಞಾನಿಯೊಬ್ಬರು ಹೇಳಿಕೊಂಡಿದ್ದಾರೆ. ಪೀಪಲ್ಸ್ ಡೈಲಿ ಚೀನಾ ಎಂಬ ಹೆಸರಿನ ಚೈನೀಸ್ ನ್ಯೂಸ್ ಪೋರ್ಟಲ್ ಮೂಲತಃ ಹಂಚಿಕೊಂಡ ಈ ವಿಡಿಯೋದಲ್ಲಿ ಕುರಿಗಳ ಹಿಂಡು ಅಚ್ಚುಕಟ್ಟಾಗಿ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿತ್ತು.
ವಿಡಿಯೋವನ್ನು ಉತ್ತರ ಚೀನಾದ ಇನ್ನರ್ ಮಂಗೋಲಿಯಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿತ್ತು. ಇದೀಗ, ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ನಲ್ಲಿರುವ ಹಾರ್ಟ್‌ಪುರಿ ವಿಶ್ವವಿದ್ಯಾಲಯದ ಕೃಷಿ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಮ್ಯಾಟ್ ಬೆಲ್ ಅವರು ವೈರಲ್ ವಿಡಿಯೋದ ಹಿಂದಿನ ರಹಸ್ಯವನ್ನು ಪರಿಹರಿಸಿರುವುದಾಗಿ ಹೇಳಿದ್ದಾರೆ.
“ಕುರಿಗಳು ದೀರ್ಘಕಾಲದವರೆಗೆ ದೊಡ್ಡಿಯಲ್ಲಿ ಇರುವಂತೆ ತೋರುತ್ತಿದೆ. ದೊಡ್ಡಿಯಲ್ಲಿ ಹೆಚ್ಚಿನ ಸ್ಥಳಾವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವು ದೊಡ್ಡಿಯ ಸುತ್ತಲೂ ಸುತ್ತುವುದಷ್ಟನ್ನೇ ರೂಢಿ ಮಾಡಿಕೊಂಡಿರುತ್ತವೆ. ಇದನ್ನೇ ರೂಢಿ ಮಾಡಿಕೊಂಡಿರುವ ಕುರಿಗಳು ಹತಾಶವಾಗಿದ್ದು, ಹೊರಗಡೆ ಬಂದಾಗಲೂ ಹಾಗೆಯೇ ವರ್ತಿಸುತ್ತಿರಬಹುದು. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ” ಎಂದಿದ್ದಾರೆ. ಇದೇನೇ ಇದ್ದರೂ ಸರಿಯಾದ ಕಾರಣ ಮಾತ್ರ ಇನ್ನೂ ನಿಗೂಢ.